ಮೈಸೂರು: ದಕ್ಷಿಣ ಭಾರತದ ಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ (S. Janaki) ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೈಸೂರಿನ ಕಣಿಯನಹುಂಡಿಯ ತೋಟದಲ್ಲಿ ಭಾನುವಾರ ಸಂಜೆ ನೆರವೇರಿತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್.ಜಾನಕಿ ಅವರು ಶನಿವಾರ ರಾತ್ರಿ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತದನಂತರ ಸಂಜೆ ವೇಳೆಗೆ ಗಾಯಕಿಯ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆದವು.
ಕಳೆದ ನಾಲ್ಕು ವರ್ಷಗಳ ಹಿಂದೆ ಎಸ್.ಜಾನಕಿ ಅವರು ಮೈಸೂರಿನ ಕಣಿಯನಹುಂಡಿಯಲ್ಲಿ 2 ಎಕರೆ ಜಮೀನು ಖರೀದಿಸಿದ್ದರು. ತಮ್ಮ ಅಂತ್ಯಕ್ರಿಯೆ ಇದೇ ಜಾಗದಲ್ಲಿ ಆಗಬೇಕು ಎಂದು ಅವರು ಇಚ್ಛಿಸಿದ್ದರು. ಅದರಂತೆ ಅವರ ಇಚ್ಛೆಯಂತೆಯೇ ಈ ಖಾಸಗಿ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇತ್ತೀಚೆಗಷ್ಟೇ ಜಾನಕಮ್ಮ ಅವರ ಪುತ್ರ ನಿಧನರಾಗಿದ್ದ ಹಿನ್ನೆಲೆಯಲ್ಲಿ, ಪುತ್ರನ ಮಗಳು (ಮೊಮ್ಮಗಳು) ಜಾನಕಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅಂತ್ಯಸಂಸ್ಕಾರದ ವೇಳೆ ಪೊಲೀಸರು 3 ಸುತ್ತು ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಶಾಶ್ವತಿ ಕ್ರಿಯಾ ಸಮಿತಿ ವತಿಯಿಂದ ಆಗಮಿಕ ರಮೇಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು. ಮೊದಲಿಗೆ ಪಂಚಗವ್ಯದಿಂದ ದೇಹ ಶುದ್ದೀಕರಣ ಮಾಡಿ, ಬಳಿಕ ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕಾಡು ಕಟ್ಟಿಗೆಗಳ ಜೊತೆಗೆ ಗಂಧ ಮತ್ತು ತುಳಸಿ ಕಟ್ಟಿಯಿಂದ ಚಿತೆ ನಿರ್ಮಾಣ ಮಾಡಲಾಗಿತ್ತು. ಸೂರ್ಯಾಸ್ತದ ಮುನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.
ಎಸ್.ಜಾನಕಿ ಅವರ ಅಂತಿಮ ಸಂಸ್ಕಾರದ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಚಿತ್ರರಂಗದ ನಟ-ನಟಿಯರು, ಸಚಿವರು, ಶಾಸಕರು, ಗಣ್ಯರು ಹಾಗೂ ಪೊಲೀಸರು ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಅಂತ್ಯಸಂಸ್ಕಾರದ ಸ್ಥಳದಲ್ಲಿ 200 ಜನ ಪೊಲೀಸರು ಹಾಗೂ 2 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿವಿಐಪಿ ಹಾಗೂ ಸಾರ್ವಜನಿಕರಿಗೂ ಕೂಡ ಅಂತಿಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


