ಉತ್ತರ ಪ್ರದೇಶದಲ್ಲಿ ಕಿರುಕುಳ ತಡೆಯಲು ಯತ್ನಿಸಿದ ದಲಿತ ಮಹಿಳೆಯನ್ನು ಬೆಲ್ಲ ತಯಾರಿಕಾ ಘಟಕದಲ್ಲಿ ಬಿಸಿ ಕಡಾಯಿಗೆ ತಳ್ಳಲಾದ ಘಟನೆ ಬುಡೌನ್ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ಸುಟ್ಟಗಾಯಗಳಿದ್ದ 18 ವರ್ಷದ ಮಹಿಳೆಯನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಜಾಫರ್ ನಗರ ಮೂಲದ ಮಹಿಳೆ ಪ್ರಮೋದ್ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಬುಧವಾರ, ಕೆಲಸದ ಸ್ಥಳದ ಮಾಲೀಕರು ಮತ್ತು ಇತರ ಮೂವರು ಮಹಿಳೆಗೆ ಕಿರುಕುಳ ನೀಡಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿದಾಗ ಮಹಿಳೆಯನ್ನು ಬೆಲ್ಲ ತಯಾರಿಕಾ ಘಟಕದ ಕುದಿಯುವ ಬಿಸಿ ಪಾತ್ರೆಗೆ ತಳ್ಳಿದ್ದಾರೆ. ಆ ಬಳಿಕ ಆರೋಪಿ ಓಡಿ ಹೋಗಿದ್ದಾನೆ. ಆರೋಪಿಗಳು ಜಾತಿ ನಿಂದನೆ ಮಾಡುತ್ತಿದ್ದರು ಎಂದು ಸಹೋದರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.


