ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸೆಕ್ಷನ್ ಹಾಕಿ. ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಕೆಯಾಗಬೇಕು. ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಪ್ರಕರಣಗಳೂ ಎಸ್ ಐಟಿ ತನಿಖೆಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಡಾ.ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ನಾಳೆ (ಜ.14) ಬಿಜೆಪಿ ಮಹಿಳಾ ನಿಯೋಗ ಹಾನಗಲ್ಗೆ ಭೇಟಿ ಕೊಡುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಪ್ರಕರಣಗಳ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಎಸ್ಐಟಿ ರಚಿಸಿದರೂ ನ್ಯಾಯಾಂಗ ಮೇಲುಸ್ತುವಾರಿಯ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿದೆ. ಯುವಕರು ರೂಂನಲ್ಲಿ ಯುವತಿಯನ್ನು ಥಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಾಮೂಹಿಕ ಅತ್ಯಾಚಾರ ಮುಚ್ಚಿಡುವ ಪ್ರಯತ್ನ ಪೊಲೀಸರು ಮಾಡಿದ್ದಾರೆ. ನಾನು ಕರೆ ಮಾಡಿ ಕೇಳಿದಾಗಲೂ ಪೊಲೀಸರು ಮೊಂಡುವಾದವನ್ನೇ ಮಾಡಿದರು. ಸಾಮೂಹಿಕ ಅತ್ಯಾಚಾರ ಆಗಿದೆ ಅಂದಿದ್ದರೂ, ಎಫ್ ಐಆರ್ ನಲ್ಲಿ ಇದನ್ನೂ ದಾಖಲಿಸಿಲ್ಲ. ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ನಾಯಕರ ಒತ್ತಡ ಇದೆ. ನಾನು ಎಸ್ಪಿಗೆ ಮಾತಾಡಿದಾಗ ಆ ರೀತಿ ಆಗಿಲ್ಲ ಎಂದರು. ಆರು ಜನರಲ್ಲಿ ಇನ್ನೂ ಮೂರು ಜನ ಅರೆಸ್ಟ್ ಆಗಿಲ್ಲ. ಗೃಹ ಸಚಿವರು ಸ್ಟಾಂಡರ್ಡ್ ಇನ್ಸ್ಟ್ರಕ್ಷನ್ ಕೊಟ್ಟಿದ್ದೇವೆ ಎಂದಿದ್ದಾರೆ. ಸಮುದಾಯಗಳನ್ನು ನೋಡಿ ಕೇಸ್ ಹಾಕಿ ಅಂತ ನೀವು ಸ್ಟಾಂಡರ್ಡ್ ಇನ್ಸ್ಟ್ರಕ್ಷನ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಬೇರೆ ಕೋಮಿನವರು ಆಗಿದ್ದರೇ ಮೊದಲು ಒಳಗೆ ಹಾಕಿ ನಂತರ ವಿಚಾರಣೆ ಮಾಡುತ್ತಿದ್ದರು. ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ? ಅಲ್ಪಸಂಖ್ಯಾತ ಹೆಣ್ಣುಮಗಳ ಮೇಲೆ ಅತ್ಯಾಚಾರ ಆಗಿದೆ. ಅಲ್ಪಸಂಖ್ಯಾತರ ರಕ್ಷಕರು ಎಂದು ಬಿಂಬಿಸುವವರು ರಕ್ಷಣೆ ಮಾಡಿಲ್ಲ. ನಿಮ್ಮ ಕೆಲಸವನ್ನು ಮಾಡುವವರಿಗೆ ಮಾತ್ರವೇ ನಿಮ್ಮ ರಕ್ಷಣೆ ಇದೆಯಾ? ಯಾವುದೇ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳು ಕಲೆಕ್ಷನ್ ಅಡ್ಡಾ ಆಗಿವೆ ಎಂದು ಆರೋಪಿಸಿದರು.


