ಬೆಂಗಳೂರು: ಬಿಡದಿ ಟೌನ್ ಶಿಪ್ ಗಾಗಿ (Bidadi Township) ಅಧಿಕಾರಿಗಳು ನಡೆಸುತ್ತಿರುವ ಸರ್ವೆ ಕಾರ್ಯದ ಹಿಂದೆ ರಾಜ್ಯ ಸರ್ಕಾರದ ಚಿತಾವಣೆ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಬಿಡದಿಯಲ್ಲಿ ರೈತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಿಂದ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಳೆದ 500 ದಿನಗಳಿಂದ ಬಿಡದಿಯಲ್ಲಿ ರೈತರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಅತ್ಯಂತ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರು. ಆದರೆ, ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಬಂದು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಮತ್ತು ಗೊಂದಲಗಳಿಗೆ ನೇರವಾಗಿ ಸರ್ಕಾರದ ಚಿತಾವಣೆಯೇ ಕಾರಣ ಎಂದು ಕುಮಾರಸ್ವಾಮಿ ದೂರಿದ್ದಾರೆ.
“ಯಾವುದೇ ಕೆಟ್ಟ ಅಥವಾ ಹಿಂಸಾತ್ಮಕ ಘಟನೆಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಶಾಂತಿಯುತ ಹೋರಾಟವನ್ನು ಹೀಗೆಯೇ ಮುಂದುವರಿಸಿ. ಕಾನೂನಾತ್ಮಕವಾಗಿ ನಿಮ್ಮ ಪರವಾಗಿ ಹೋರಾಡಲು ಅನೇಕರು ಸದಾ ಸಿದ್ಧರಿದ್ದಾರೆ. ಸರ್ಕಾರದ ದೌರ್ಜನ್ಯ ಮತ್ತು ಅಧಿಕಾರ ದುರ್ಬಳಕೆಗೆ ನಿಮ್ಮ ಹೋರಾಟ ಹಳಿತಪ್ಪಬಾರದು.”
ಇದೇ ವೇಳೆ ಪೊಲೀಸರ ನಡೆಗೂ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, “ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪೊಲೀಸರು ಕೇವಲ ಸರ್ಕಾರದ ಒತ್ತಡ ಅಥವಾ ಸೂಚನೆಗೆ ಹೆದರಿ ರೈತ ವಿರೋಧಿ ನೀತಿಯನ್ನು ಅನುಸರಿಸಬೇಡಿ” ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಸರ್ಕಾರದ ತಪ್ಪು ನಿರ್ಧಾರಗಳಿಗೆ ಕೈಜೋಡಿಸಿದರೆ, ಮುಂದಿನ ದಿನಗಳಲ್ಲಿ ಅದರ ಕೆಟ್ಟ ಪರಿಣಾಮವನ್ನು ಪೊಲೀಸರೂ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


