ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತ ಬಾಲಕಿಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಬೆರಗುಗೊಳಿಸುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯನ್ನು ಗರ್ಭಿಣಿ ಮಾಡಿದ ಯುವಕನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿಷಯ ತಿಳಿದಿದ್ದರೂ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡದೆ ಮುಚ್ಚಿಟ್ಟ ನಾಲ್ವರು ವೈದ್ಯರು ಹಾಗೂ ಬಾಲಕಿಯ ಪೋಷಕರ ವಿರುದ್ಧವೂ ಎಫ್ ಐಆರ್ (FIR) ದಾಖಲಿಸಲಾಗಿದೆ.
ಕಳೆದ ವರ್ಷ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಮನೆಯೊಂದರಲ್ಲಿ ಬಲವಂತವಾಗಿ ಕೂಡಿಹಾಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಬಾಲಕಿ ತನ್ನ ಹೆತ್ತವರ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ.
ಆಗ ಪೋಷಕರು ಕಲಘಟಗಿ ತಾಲೂಕಿನ ಗ್ರಾಮವೊಂದರ ವೈದ್ಯರ ಬಳಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಆ ವೈದ್ಯರ ಸಲಹೆಯಂತೆ ಹುಬ್ಬಳ್ಳಿಯ ಖಾಸಗಿ ನರ್ಸಿಂಗ್ ಹೋಮ್‌ವೊಂದಕ್ಕೆ ತೋರಿಸಲಾಗಿತ್ತು. ಬಾಲಕಿ ಅಪ್ರಾಪ್ತ ವಯಸ್ಸಿನವಳು ಮತ್ತು ಆಕೆ ಗರ್ಭಿಣಿಯಾಗಿರುವುದು ಗೊತ್ತಿದ್ದರೂ ಸಹ, ಈ ವೈದ್ಯರು ಕಾನೂನು ಪ್ರಕಾರ ಪೊಲೀಸರಿಗೆ ಅಥವಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದೆ ವಿಷಯವನ್ನು ಗೌಪ್ಯವಾಗಿಟ್ಟಿದ್ದರು.
ಜುಲೈ 8 ರಂದು ಬಾಲಕಿ ತನ್ನ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ನಂತರ ಆಕೆಗೆ ತೀವ್ರ ರಕ್ತಸ್ರಾವ ಉಂಟಾದಾಗ ಗಾಬರಿಗೊಂಡ ಪೋಷಕರು ಮೊದಲು ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KMC-RI) ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಕೇವಲ 14 ವರ್ಷ 3 ತಿಂಗಳು ವಯಸ್ಸಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಿಮ್ಸ್ ಆಸ್ಪತ್ರೆಯ ನಿರ್ಭಯ ವಾರ್ಡ್‌ನಲ್ಲಿ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಜಶೇಖರ ತಿಳಿಸಿದ್ದಾರೆ.
ವೈದ್ಯರು ಹಾಗೂ ಪೋಷಕರ ವಿರುದ್ಧ ದೂರು:
ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ವಿಷಯವನ್ನು ಮುಚ್ಚಿಟ್ಟ ಕಾರಣಕ್ಕಾಗಿ, ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೀಪಾ ಜಾವೂರ ಅವರು ಹುಬ್ಬಳ್ಳಿಯ ಶಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಘಟನೆ ಮುಚ್ಚಿಟ್ಟ ಕಲಘಟಗಿಯ ಒಬ್ಬ ವೈದ್ಯ, ಹುಬ್ಬಳ್ಳಿ ನರ್ಸಿಂಗ್ ಹೋಮ್‌ನ ಮೂವರು ವೈದ್ಯರು ಸೇರಿದಂತೆ ಬಾಲಕಿಯ ತಂದೆ-ತಾಯಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಮುಖ ಆರೋಪಿಯ ಬಂಧನಕ್ಕಾಗಿ ಶಹರ್ ಠಾಣೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


