ತಿಪಟೂರು: ಜಲಮೂಲಗಳ ಸಂರಕ್ಷಣೆ ಅತ್ಯಂತ ಮಹತ್ವವಾದದ್ದು, ಜಲವಿಲ್ಲದಿದ್ದರೆ ಬದುಕಲು ಅಸಾಧ್ಯ ಹಾಗಾಗಿ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ತಿಪಟೂರು ತಾಲೂಕಿನ ಸುಕ್ಷೇತ್ರ ಕೆರಗೋಡಿ- ರಂಗಾಪುರ ಶ್ರೀ ಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾದ 610 ನೇ ಕೆರೆ ಹಸ್ತಾಂತರ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಲ ಇಲ್ಲದೆ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ ಅಗ್ನಿ ವಾಯು ಕೂಡ ಮುಖ್ಯ ಆದರೆ ನಾವು ಮುಖ್ಯವಾದವುಗಳನ್ನೇ ಮರೆಯುತ್ತಿದ್ದೇವೆ. 2022 ರಲ್ಲಿ ಉಂಟಾದ ಅತಿವೃಷ್ಟಿಯನ್ನು ನಾವೆಲ್ಲರೂ ನಮ್ಮ ಕಣ್ಣೆದುರೇ ನೋಡಿದ್ದೇವೆ. ಕೆರೆ ಕುಂಟೆಗಳು ಕಾಲುವೆಗಳು ಸರಿಯಾಗಿದ್ದರೆ ನೀರು ಸರಿಯಾಗಿ ಹರಿಯುತ್ತದೆ ಅದರಿಂದ ಕೆರೆಕುಂಟೆ ಗಳ ಉಳಿವಿಗೆ ಸಂಸ್ಥೆಯ ಯೋಜನೆಯ ಮೂಲಕ ಕಾರ್ಯಕ್ರಮವನ್ನು ರೂಪಿಸಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರವು ಮುಖ್ಯ ಎಂದರು.
ಗ್ರಾಮದ ಕೆರೆ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಹಲವಡೆ ಕೆರೆ ಅಭಿವೃದ್ಧಿ ಮಾಡಿದ ಬಳಿಕ ಕೆರೆ ಏರಿ ಮೇಲೆ ಹಸು ಕರುಗಳನ್ನು ಕಟ್ಟಿ ಹಾಕುವುದನ್ನು ನಾನು ನೋಡಿದ್ದೇನೆ ಇದರಿಂದ ಮಾಡಿದ ಕೆಲಸ ಸಾರ್ಥಕ ಆಗುವುದಿಲ್ಲ ನಿಮ್ಮೂರಿನ ಕೆರೆಯನ್ನು ನೀವೇ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈವರೆಗೆ ರಾಜ್ಯಾದ್ಯಂತ 672 ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ ಈವರೆಗೆ 53 ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು ತಿಪಟೂರು ತಾಲೂಕಿನಲ್ಲಿ ಈವರೆಗೆ 7 ಕೆರೆಗಳನ್ನು ಅಭಿವೃದ್ಧಿ ಮಾಡಿರುವ ಹೆಗ್ಗಳಿಕೆ ಸಂಸ್ಥೆಗೆ ಸಲ್ಲುತ್ತದೆ.
ಸಂಸ್ಥೆಯಿಂದ ದೊರೆಯುವ ಎಲ್ಲಾ ಪ್ರಯೋಜನಗಳನ್ನು ಎಲ್ಲರೂ ಪ್ರಾಮಾಣಿಕತೆಯಿಂದ ಬಳಸಿಕೊಂಡು ಎಲ್ಲರೂ ಅಭಿವೃದ್ಧಿ ಕಾಣಲೆಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಎಲ್ಲರಿಗೂ ಶುಭ ಹಾರೈಕೆ ಮಾಡಿದರು.
ಈ ಸಂದರ್ಭದಲ್ಲಿ ಸುಕ್ಷೇತ್ರ ಕೆರಗೋಡಿ ರಂಗಾಪುರ ಮಠದ ಶ್ರೀ ಶ್ರೀ ಗುರು ಪರದೇಶಿ ಕೇಂದ್ರ ಮಹಾ ಸ್ವಾಮೀಜಿ ಗಳು ಮಾತನಾಡಿ, ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀಮಠಕ್ಕೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯ ಧರ್ಮಸ್ಥಳ ಸಂಸ್ಥೆ ವತಿಯಿಂದ ಮಠದ ಆವರಣದಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಿ ಕೆರೆಯನ್ನು ಅಭಿವೃದ್ಧಿ ಮಾಡಿ ನೀಡಿದ್ದು ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಸಂಸ್ಥೆಯು ಸರ್ಕಾರ ಮಾಡದ ಕೆಲಸಗಳನ್ನು ಮಾಡುತ್ತಿದ್ದು ಸಂಸ್ಥೆಗೆ ಚಿರಋಣಿ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಳೀಯ ಯೋಜನಾಧಿಕಾರಿಗಳಾದ ಉದಯ್ ಕೆ,ಮಠದ ಪದಾಧಿಕಾರಿಗಳು, ಕೆರೆ ಸಮಿತಿ ಅಧ್ಯಕ್ಷರಾದ ಮನೋಹರ್, ಕೆರೆ ಸಮಿತಿಯ ಪದಾಧಿಕಾರಿಗಳು ಊರಿನ ಗ್ರಾಮಸ್ಥರು, ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು.
ವರದಿ: ಆನಂದ್ ತಿಪಟೂರು