ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಅಪರಾಧಿಗಳಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್. ಟಿ.ಎಸ್.ಸಿ.(ಪೋಕ್ಸೋ)ವು ಜೀವಾವಧಿ ಶಿಕ್ಷೆ ಹಾಗೂ ತಲಾ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ನೊಂದ ಬಾಲಕಿ 14 ವರ್ಷ ವಯಸ್ಸಿನವಳಾಗಿದ್ದಾಳೆ. ಆಕೆಯ ತಾಯಿ ತವರು ಮನೆಗೆ ಹೋಗಿದ್ದ ವೇಳೆ ಬಾಲಕಿ ಹಾಗೂ ತಂದೆ ಮಾತ್ರವೇ ಮನೆಯಲ್ಲಿದ್ದರು. ಬಾಲಕಿಯ ತಂದೆ ಕುಡಿತದ ಚಟ ಹೊಂದಿದ್ದರು. ಇದೇ ಸಂದರ್ಭದಲ್ಲಿ 1ನೇ ಆರೋಪಿ ಬ್ಯಾಡರಹಳ್ಳಿಯ ರಾಮಚಂದ್ರಯ್ಯ(55) ನೊಂದ ಬಾಲಕಿಗೆ ತಿನ್ನಲು ತಿಂಡಿಗೆ ಹಣ ನೀಡುವುದಾಗಿ ಪುಸಲಾಯಿಸಿ ಬಲವಂತವಾಗಿ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು, ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು.
ಬಳಿಕ ಆಕೆಯನ್ನು ರಾಮಣ್ಣ ಎಂಬ ವ್ಯಕ್ತಿಯ ಉಪ್ಪು ನೇರಳೆ ತೋಟಕ್ಕೆ ಕರೆದೊಯ್ದು ಅಲ್ಲಿಯೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದನು. ಈ ದೃಶ್ಯವನ್ನು 2ನೇ ಆರೋಪಿ ಹೊಸವಿರಾಮಯ್ಯ ಅಲಿಯಾಸ್ ಕೂಮಯ್ಯ(60) ಬ್ಯಾಡರಹಳ್ಳಿ ಎಂಬಾತ ನೋಡಿದ್ದು, ಆತ ನೊಂದ ಬಾಲಕಿಗೆ ಬೆದರಿಕೆ ಹಾಕಿ, ತಾನು ಕರೆದ ಜಾಗಕ್ಕೆ ಬಾರದಿದ್ದರೆ, ಈ ವಿಷಯ ಊರು ತುಂಬಾ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿದ್ದು, ಆಕೆಯನ್ನು ವೀರಪ್ಪಾಜಿ ತೋಟಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ.
ಬಾಲಕಿಯ ಮೇಲೆ 1 ಮತ್ತು 2ನೇ ಆರೋಪಿಗಳು ಅತ್ಯಾಚಾರ ನಡೆಸುವ ದೃಶ್ಯವನ್ನು 3ನೇ ಆರೋಪಿ ವೆಂಕಟೇಶ ಅಲಿಯಾಸ್ ವೆಂಕಟ್ಟಪ್ಪ(40) ಎಂಬಾತ ನೋಡಿದ್ದು, ಆತ ಬಾಲಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಷಯವನ್ನು ಗ್ರಾಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ತನ್ನ ಮನೆಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ.
ಅಪರಾಧಿಗಳ ಕೃತ್ಯದಿಂದಾಗಿ ನೊಂದ ಬಾಲಕಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ತೆರಳಿದ ವೇಳೆ ವಿಚಾರ ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ತನಿಖಾಧಿಕಾರಿ ಎ.ಎನ್. ಅಶೋಕ್ ಕುಮಾರ್ ಅವರು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಆರೋಪಿಗಳಾದ ರಾಮಚಂದ್ರಯ್ಯ, ಹೊಸವಿರಾಮಯ್ಯ ಮತ್ತು ವೆಂಕಟೇಶ ಇವರ ವಿರುದ್ಧದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್. ಟಿ.ಎಸ್.ಸಿ. ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗಳಾದ ರಾಮಚಂದ್ರಯ್ಯ, ಹೊಸವಿರಾಮಯ್ಯ ಮತ್ತು ವೆಂಕಟೇಶ್ ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೊಂದ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296