ತುಮಕೂರು: ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದಲ್ಲಿ 96,574 ರೂ ಗಳಿಂದ 1,06,231 ರೂ.ಗಳ ವರೆಗೆ ಶುಲ್ಕ ಏರಿಸಿದ್ದು, ಟೈಪ್-1 ಕಾಲೇಜುಗಳಲ್ಲಿ 1.69 ಲಕ್ಷ ರೂ.ಗಳಿಂದ 1.86ಲಕ್ಷ ರೂಗಳವರೆಗೆ ಹಾಗೂ ಟೈಪ್-2 ಕಾಲೇಜುಗಳಲ್ಲಿ 2.37 ಲಕ್ಷ ರೂಗಳಿಂದ 2.61 ಲಕ್ಷ ರೂ.ಗಳವರೆಗೆ ಶುಲ್ಕ ಏರಿಸಲಾಗಿದೆ ಇದು ಖಂಡನೀಯ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ. ಬಿ. ಹೇಳಿದ್ದಾರೆ.
ಈಗಾಗಲೇ ಯಾವುದೇ ಅಡೆ–ತಡೆ ಇಲ್ಲದೇ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಬರುವ ಶುಲ್ಕವನ್ನು ಮನಸೋಇಚ್ಛೆ ಖಾಸಗಿ ಕಾಲೇಜುಗಳು ಏರಿಸುತ್ತಿವೆ. ಬೆಂಗಳೂರಿನ ಕಾಲೇಜು ಒಂದರಲ್ಲಿ ಮ್ಯಾನೇಜ್ಮೆಂಟ್ ಸೀಟಿನ ಶುಲ್ಕ 26 ಲಕ್ಷದಷ್ಟಿದೆ. ಇಂತಹ ಸಂದರ್ಭದಲ್ಲಿ, ಸರ್ಕಾರದ ನಿಯಂತ್ರಣದ ಕೆಳಗೆ ಬರುವ ಶುಲ್ಕವನ್ನಾದರೂ ಏರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಈ ರೀತಿ ಪ್ರತಿ ವರ್ಷ ಶೈಕ್ಷಣಿಕ ಶುಲ್ಕ ಏರಿಕೆ, ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀ ವಹಿವಾಟಿನಂತೆ ಮಾಡಲು ಸರ್ಕಾರವೇ ಅನುಮತಿ ನೀಡುತ್ತಿದೆ. ಇದು ಅತ್ಯಂತ ದುರಾದೃಷ್ಟಕರ ಎಂದು ಅವರು ಹೇಳಿದ್ದಾರೆ.
ಖಾಸಗೀ ಕಾಲೇಜುಗಳಲ್ಲಿ, ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಮರೀಚಿಕೆಯಾಗಿದೆ. ಹೀಗಿದ್ದಾಗ್ಯೂ, ಪ್ರತೀ ವರ್ಷ ಶುಲ್ಕ ಏರಿಕೆ ನಡೆದರೆ, ಮುಂದಿನ ದಿನಗಳಲ್ಲಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಯಾರೂ ಸಹ, ಖಾಸಗೀ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೇರುವುದು ಸಾಧ್ಯವಾಗುವುದಿಲ್ಲ. ಇದಾಗಲೇ, ಖಾಸಗೀ ಅನುದಾನಿತ ಇಂಜಿನಿಯರಿಂಗ್ ಸೀಟುಗಳನ್ನು ಕಡಿಮೆ ಮಾಡುತ್ತಿರುವ ಸರ್ಕಾರ ಶುಲ್ಕ ಏರಿಕೆಯ ಒತ್ತಡಕ್ಕೆ ಮಣಿದಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಈ ಕೂಡಲೇ, ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA