ಬೆಂಗಳೂರು: ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳು ಹಾಗೂ ಮಹಾತ್ಮ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ವಿಚಾರ ಸಂಕಿರಣ ನಡೆಯಿತು.
ವಿಚಾರ ಸಂಕಿರಣದ ಮುಖ್ಯ ವಿಷಯವಾಗಿ “ಒಳ ಮೀಸಲಾತಿಯ ಒಳಸುಳಿ ಹಾಗೂ ಮೀಸಲಾತಿಯ ಮುನ್ನೋಟ” ಕುರಿತು ವಿಸ್ತೃತ ಮತ್ತು ಗಂಭೀರ ಚರ್ಚೆಗಳು ನಡೆಯುವ ಮೂಲಕ ಸಾಮಾಜಿಕ ನ್ಯಾಯದ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಾಯಿತು.
ಪ್ರೊ. ಶ್ರೀನಿವಾಸ್ ಜಿ. ಪ್ರಾಸ್ತಾವಿಕವಾಗಿ ಮಾತಾಡಿ, ಒಳಮೀಸಲಾತಿ ಸಾಮಾಜಿಕ ನ್ಯಾಯದ ಅನಿವಾರ್ಯ ಹಂತ ಎಂದು ಅಭಿಪ್ರಾಯಪಟ್ಟರು. ಅಲೆಮಾರಿ ಸಮುದಾಯಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಕನಿಷ್ಠ ಒಂದು ಶೇಕಡಾ ಮೀಸಲಾತಿ ನೀಡಬೇಕು ಎಂಬ ಸ್ಪಷ್ಟ ಬೇಡಿಕೆಯನ್ನು ಮುಂದಿಟ್ಟ ಅವರು, ನೂರು ಬಿಂದುಗಳ ರೋಸ್ಟರ್ ವ್ಯವಸ್ಥೆಯಲ್ಲಿ ಪ್ರವರ್ಗ ಎ, ಬಿ ಮತ್ತು ಸಿಗಳಿಗೆ ಕ್ರಮಬದ್ಧವಾಗಿ ಅವಕಾಶ ಕಲ್ಪಿಸುವಂತೆ ರೋಸ್ಟರ್‌ನಲ್ಲಿ ಸ್ಪಷ್ಟ ಹೆಸರೀಕರಣ ಮಾಡಬೇಕೆಂದು ಒತ್ತಾಯಿಸಿದರು. ರೋಸ್ಟರ್ ವ್ಯವಸ್ಥೆ ಪಾರದರ್ಶಕವಾಗಿರದೆ ಹೋದರೆ ಮೀಸಲಾತಿಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರಮುಖ ವಿಚಾರವಾಗಿ, ಕೆನೆಪದರ (Creamy Layer) ವ್ಯವಸ್ಥೆಯನ್ನು ಎಸ್ ಸಿ-–ಎಸ್ ಟಿ ಸಮುದಾಯಗಳಿಗೆ ಅನ್ವಯಿಸಬಾರದು ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ ಪ್ರಿಫರೆನ್ಶಿಯಲ್ ಸಿಸ್ಟಮ್ ಹಾಗೂ ಕ್ಯಾರಿ ಫಾರ್ವರ್ಡ್ ಸಿಸ್ಟಮ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಪರಿಶಿಷ್ಟ ಜಾತಿ–ಪಂಗಡಗಳ ಒಳಗೆಯೇ ನಾಲ್ಕು ಉಪಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ನೀಡಬೇಕು ಎಂಬ ಅಭಿಪ್ರಾಯವನ್ನೂ ಮಂಡಿಸಿದರು ಜೊತೆಗೆ, ಆದಿ ಆಂದ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಪದಗಳು ಜಾತಿ ಸೂಚಕಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇವುಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿರುವ ಕಾರಣದಿಂದ ಕೆಲವರು ಈ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಅವರು, ಸರ್ಕಾರವು ಈ ಮೂರು ಪದಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತಕ್ಷಣವೇ ತೆಗೆಯಬೇಕು ಎಂದು ಆಗ್ರಹಿಸಿದರು. ಇದರಿಂದ ಸಂಬಂಧಪಟ್ಟವರು ತಮ್ಮ ಮೂಲ ಜಾತಿಯನ್ನು ನಮೂದಿಸಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು ಮುಂದಾಗಲಿದ್ದು, ಮೀಸಲಾತಿಯ ದುರುಪಯೋಗವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾಶಿವ ಆಯೋಗ ಮತ್ತು ನಾಗಮೋಹನ್ ದಾಸ್ ಸಮಿತಿ ವಿಶ್ಲೇಷಣೆ:
ಭೀಮಾಶಂಕರ್ ಅವರು ಮಾತನಾಡಿ, ಎ.ಜೆ. ಸದಾಶಿವ ಆಯೋಗವು ಜಾತಿ ಆಧಾರಿತವಾಗಿ ಒಳಮೀಸಲಾತಿಯನ್ನು ವಿಶ್ಲೇಷಿಸಿದ್ದು, ನಾಗಮೋಹನ್ ದಾಸ್ ಸಮಿತಿಯು ವರ್ಗ ಮತ್ತು ವರ್ಗೀಕರಣ ಆಧಾರದಲ್ಲಿ ಅಧ್ಯಯನ ನಡೆಸಿದೆ ಎಂದು ವಿವರಿಸಿದರು. ಜೊತೆಗೆ ಎಸ್ ಸಿಪಿ -– ಟಿಎಸ್ಪಿ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿ, ಅದರ ಸಮರ್ಪಕ ಬಳಕೆಗೆ ವ್ಯವಸ್ಥೆ ರೂಪಿಸಬೇಕೆಂದು ಹೇಳಿದರು.
ಮೀಸಲಾತಿ ಬಗ್ಗೆ ತಪ್ಪು ಪ್ರಚಾರ: ರುದ್ರಯ್ಯ
ರುದ್ರಯ್ಯ ಅವರು ಮಾತನಾಡಿ,“ಸ್ವಾತಂತ್ರ್ಯ ಬಂದ ತಕ್ಷಣದಿಂದಲೇ ಎಲ್ಲರಿಗೂ ಮೀಸಲಾತಿ ಸಿಕ್ಕಿತು ಎನ್ನುವುದು ತಪ್ಪು. ಸ್ವಾತಂತ್ರ್ಯದ ಸುಮಾರು ಐವತ್ತು ವರ್ಷಗಳ ನಂತರ ಮಾತ್ರ ಎಸ್‌ಸಿ–ಎಸ್‌ಟಿ–ಒಬಿಸಿ ಸಮುದಾಯಗಳಿಗೆ ಮೀಸಲಾತಿ ಪ್ರಾಯೋಗಿಕವಾಗಿ ಲಭಿಸಲು ಆರಂಭವಾಯಿತು. ಈಗ ಒಂದೇ ತಲೆಮಾರಿನಲ್ಲಿ ಹೆಚ್ಚು ಜನ ವಿದ್ಯಾವಂತರಾಗಿರುವುದರಿಂದ ಮೀಸಲಾತಿಯ ಪ್ರಯೋಜನ ಕಾಣುತ್ತಿದೆ” ಎಂದು ಹೇಳಿದರು. ಎದುರಾಗಿರುವ ಸಮಸ್ಯೆಗಳನ್ನು ನಾವು ನಮ್ಮೊಳಗೇ ಬಗೆಹರಿಸಿಕೊಂಡು ಮುಂದೆ ಸಾಗಬೇಕು ಎಂದು ಕರೆ ನೀಡಿದರು.
ಒಗ್ಗಟ್ಟಿನ ಅಗತ್ಯ : ಹರಿರಾಮ್
ಹರಿರಾಮ್ ಅವರು ಮಾತನಾಡಿ, “ಒಳಗಿನಿಂದಲೇ ನಮ್ಮೊಳಗೆ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಕೆಲವರು ಹೊಲೆಯರು–ಮಾದಿಗರು ನಡುವೆ ಭೇದ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಸರ್ಕಾರಗಳು ನಮ್ಮನ್ನು ವಿಭಜಿಸಲು ಪ್ರಯತ್ನ ಮಾಡುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಒಟ್ಟಾಗಿ ನಿಲ್ಲಬೇಕು, ನಮಗೆ ಬೇಕಾದ ಹಕ್ಕುಗಳನ್ನು ಒಗ್ಗಟ್ಟಿನಿಂದ ಪಡೆಯಬೇಕು” ಎಂದು ಹೇಳಿದರು.
ಸಮೀಕ್ಷೆ ಎಲ್ಲರಿಗೂ ಆಗಲಿ –ಮನೋರಂಜಿನಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೋರಂಜಿನಿ ಅವರು, “ಸಮೀಕ್ಷೆ ಎಂದರೆ ಸದಾ ನಮ್ಮ ಮೇಲೆಯೇ ಯಾಕೆ? ನಮಗೆ ಏನು ಇಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಮೇಲ್ವರ್ಗದವರ ಬಳಿ ಎಷ್ಟು ಭೂಮಿ, ಎಷ್ಟು ಉದ್ಯೋಗ, ಎಷ್ಟು ಅಧಿಕಾರ ಸ್ಥಾನಗಳಿವೆ ಎಂಬುದರ ಮೇಲೂ ಸಮೀಕ್ಷೆ ನಡೆಯಲಿ. ಆಗ ಯಾರು ಏನು ಪಡೆದಿದ್ದಾರೆ ಎಂಬ ಸತ್ಯ ಹೊರಬರುತ್ತದೆ” ಎಂದು ಹೇಳಿದರು.
ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿಗೆ ಒತ್ತಾಯ:
ಅಲೆಮಾರಿ ಸಮುದಾಯದ ಪ್ರತಿನಿಧಿ ಲೋಹಿತ್ ಅವರು ಮಾತನಾಡಿ, “ಅಲೆಮಾರಿ ಸಮುದಾಯಕ್ಕೆ ಕನಿಷ್ಠ ಒಂದು ಶೇಕಡಾ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಾಯ ಹಾಕಬೇಕು. ಈ ವಿಚಾರದಲ್ಲಿ ಎಲ್ಲರೂ ನಮ್ಮೊಂದಿಗೆ ನಿಲ್ಲಬೇಕು” ಎಂದು ಮನವಿ ಮಾಡಿದರು.
ಒಳ ಮೀಸಲಾತಿ ವಿಚಾರದಿಂದ ಮಾದಿಗ–ಹೊಲೆಯ ಸಮುದಾಯಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ವ್ಯಕ್ತವಾಯಿತು. ಈ ಹಿನ್ನೆಲೆ, ಎಲ್ಲ ಸಮುದಾಯಗಳನ್ನು ಒಂದಾಗಿಸಿ ಸಾಮಾಜಿಕ ಏಕತೆಯನ್ನು ಕಾಪಾಡುವುದು ಭಾರತೀಯ ವಿದ್ಯಾರ್ಥಿ ಸಂಘದ ಪ್ರಮುಖ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


