ತುಮಕೂರು: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್’ಶಿಪ್’ನಲ್ಲಿ ಆತಿಥೇಯ ಕರ್ನಾಟಕದ ಪುರುಷರ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಕೊಕ್ಕೊ ಫೆಡರೇಷನ್ ಆಫ್ ಇಂಡಿಯಾ ಹಾಗೂ ರಾಜ್ಯ ಅಮೆಚೂರ್ ಕೊಕ್ಕೊ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಪ್ರತಿಷ್ಠಿತ ಪಂದ್ಯಾವಳಿಯು ಫೆಬ್ರವರಿ 3ರ ವರೆಗೆ ನಡೆಯಲಿದೆ.
ಕರ್ನಾಟಕದ ಜಯಭೇರಿ: ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ ವಿರುದ್ಧ 11–06 ಪಾಯಿಂಟ್ಸ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಇತರ ಪಂದ್ಯಗಳ ಫಲಿತಾಂಶ:
ಪುರುಷರ ವಿಭಾಗ: ಒಡಿಶಾ ತಂಡವು ಹರಿಯಾಣ ವಿರುದ್ಧ (17–14), ಚಂಡೀಗಢವು ಮಧ್ಯಪ್ರದೇಶದ ವಿರುದ್ಧ (20–12), ಉತ್ತರ ಪ್ರದೇಶವು ಹಿಮಾಚಲ ಪ್ರದೇಶದ ವಿರುದ್ಧ (17–12) ಮತ್ತು ಪಂಜಾಬ್ ತಂಡವು ಛತ್ತೀಸ್‌ಗಡ ವಿರುದ್ಧ (17–15) ಜಯ ದಾಖಲಿಸಿವೆ.
ಮಹಿಳೆಯರ ವಿಭಾಗ: ಪಂಜಾಬ್ ತಂಡವು ನವದೆಹಲಿ ವಿರುದ್ಧ (15–02) ಸುಲಭ ಜಯ ದಾಖಲಿಸಿದರೆ, ಮಹಾರಾಷ್ಟ್ರ ತಂಡವು ತೆಲಂಗಾಣ ವಿರುದ್ಧ (11–03) ಜಯಗಳಿಸಿತು. ಹಿಮಾಚಲ ಪ್ರದೇಶ ಮತ್ತು ಚಂಡೀಗಢ ತಂಡಗಳು ಕೂಡ ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ರಾಜ್ಯ ಕೊಕ್ಕೊ ಫೆಡರೇಷನ್ ಅಧ್ಯಕ್ಷರಾದ ನಾಗರಾಜು ವಿ.ಬೈರಿ ಅವರು ಈ ಚಾಂಪಿಯನ್’ಶಿಪ್’ಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಮಿತಿ ಅಧ್ಯಕ್ಷ ಎನ್.ನರಸಿಂಹರಾಜು ಸೇರಿದಂತೆ ಕ್ರೀಡಾ ಸಂಘಟನೆಯ ಪ್ರಮುಖರು ಮತ್ತು ತರಬೇತುದಾರರು ಉಪಸ್ಥಿತರಿದ್ದರು.
ಮೈದಾನದಲ್ಲಿ ಆಟಗಾರರ ಚುರುಕಿನ ರಕ್ಷಣಾತ್ಮಕ ಆಟ ಮತ್ತು ಅಂಕ ಗಳಿಸಲು ನಡೆಸಿದ ಹೋರಾಟ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


