ಪಾವಗಡ: ನಿರಂತರವಾಗಿರುವ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯತೆ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್.ಎಸ್.ಕೆ. ರಂಗಮಂದಿರದಲ್ಲಿ ಮಂಗಳವಾರ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ದೇಶದಲ್ಲಿ ದೊಡ್ಡಮಟ್ಟದ ಪಲ್ಲಟ ಉಂಟುಮಾಡಿದೆ. ಸೆರೆಮನೆಯಲ್ಲಿದ್ದ ಶಿಕ್ಷಣ ಹಳ್ಳಿಗಳಿಗೆ, ಹಟ್ಟಿಗಳಿಗೆ, ಮಣ್ಣಿನ ಮನೆಗಳಿಗೆ, ಪ್ರತಿಯೊಬ್ಬರಲ್ಲಿ ಹರಿದುಬಂದಾಗ ಅಕ್ಷರಸ್ಥರು ಬೆಳೆದು ವಿದ್ಯಾವಂತರಾದರು. ಸಮುದಾಯಗಳ ಪ್ರಗತಿಯ ಪರ್ವ ಪ್ರಾರಂಭವಾಯಿತು. ಆದರೆ ಇಂದು ಶೇಕಡಾವಾರು ಫಲಿತಾಂಶಕ್ಕೆ ಮನ್ನಣೆ ನೀಡಲಾಗುತ್ತಿದ್ದು, ಪ್ರಗತಿ ಬದಲಾಗಿ ಅಂಕ ಆಧಾರಿತವಾಗಿ ದೊರೆಯುತ್ತಿರುವ ಶಿಕ್ಷಣವನ್ನು ಗುಣಮಟ್ಟದ ಶಿಕ್ಷಣ ಎಂದು ಕರೆಯಲಾಗುವುದಿಲ್ಲ ಎಂದರು.
ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಏಕರೂಪವಾಗಿರಬೇಕು ಮತ್ತು ಉನ್ನತ ಶಿಕ್ಷಣ ಬಹುರೂಪಿಯಾಗಿರಬೇಕು. ಗಡಿಭಾಗಗಳಲ್ಲಿ ಅನಿವಾರ್ಯವಾಗಿ ಕನಿಷ್ಠ ಎರಡು ಭಾಷೆಗಳು ಮತ್ತು ಎರಡು, ಮೂರು ಸಂಸ್ಕೃತಿಗಳಿರುವುದು ಸಹಜ. ಈ ಪ್ರದೇಶ ಕೊನೆಯಲ್ಲಿ ಇರುವುದರಿಂದ ಆಳುವವರ ನಿರ್ಲಕ್ಷ್ಯಕ್ಕೆ ಒಳಗಾಗುವುದು ಉಂಟು. ಗಡಿನಾಡು ಪ್ರಗತಿಗಾಗಿ ಸ್ಥಾಪನೆಗೊಂಡಿರುವ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಅನುದಾನಗಳು ದೊರೆಯುತ್ತಿವೆ. ಆದರೆ ಅದನ್ನು ಕೇಳಿ ಪಡೆಯುವಲ್ಲಿ ಜನತೆ ಮತ್ತು ಜನಪ್ರತಿನಿಧಿಗಳು ಹಿಂದುಳಿದಿರುವುದು ಸರಿಯಲ್ಲ ಎಂದರು.
ಕನ್ನಡ ಭವನ:
ಭವಿಷ್ಯದ ಪ್ರಜೆಯನ್ನು, ಪ್ರತಿಭೆಯನ್ನು ರೂಪಿಸುವ ಅಂಗನವಾಡಿ, ಸರ್ಕಾರಿ ಪ್ರಾಥಮಿಕ ಶಾಲೆಗಳು ಸೇರಿದಂತೆ ಪದವಿಪೂರ್ವ ಶಿಕ್ಷಣದವರೆಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ ಭವಿಷ್ಯ ಬರಡಾಗುತ್ತದೆ. ಅಂಗನವಾಡಿ, ಎಲ್.ಕೆ.ಜಿ, ಯು.ಕೆ.ಜಿ ಎಂಬಂತೆ ಪ್ರಾರಂಭಿಕ ಹಂತದಲ್ಲಿ ಹಸುಗೂಸುಗಳಿಗೆ ಶೈಕ್ಷಣಿಕ ಅಸಮಾನತೆ ಬಿತ್ತುವ ನಿಲುವಿಗೆ ಧಿಕ್ಕಾರ ಕೂಗಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡ ಭವನ ಇಲ್ಲವೆಂದರೆ ಅದರಿಂದ ಸರ್ಕಾರ ಅವಮಾನ ಪಡಬೇಕು. ಇಲಾಖೆಗೆ ಅರ್ಜಿ ಸಲ್ಲಿಸದರೆ ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಜಾನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಜಾನಪದ ಸಾಹಿತ್ಯ ಅಪಾರವಾಗಿದೆ, ಅದನ್ನು ಹೊರತರುವ ಜವಾಬ್ದಾರಿ ಯುವಜನತೆಯ ಮೇಲಿದೆ. ತಾಲ್ಲೂಕು ಮತ್ತು ಬೆಳೆಯಬೇಕಾದರೆ ಸಾಂಸ್ಕೃತಿಕ ಜೊತೆಗೆ ಆಧುನಿಕ ಸೌಲಭ್ಯಗಳ ಅವಶ್ಯಕತೆ ಇದೆ. ತಾಂತ್ರಿಕ ಮತ್ತು ಉನ್ನತ ಮಟ್ಟದ ಶಿಕ್ಷಣಗಳು ಸ್ಥಳೀಯವಾಗಿ ದೊರೆಯಬೇಕು. ಸ್ಥಳೀಯ ಪ್ರತಿಭೆಗಳಿಗೆ ತಕ್ಕ ಜೀವನೋಪಾಯಕ್ಕಾಗಿ ಸ್ಥಳೀಯವಾಗಿಯೇ ದೊರೆಯುವ ವ್ಯವಸ್ಥೆ ಆಗಬೇಕಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ್ ಮಾತನಾಡಿ, ವಂತಿಗೆ ರೂಪದಲ್ಲಿ ತಾಲ್ಲೂಕಿನ ಅಧಿಕಾರ ಪಡೆಯುತ್ತಿರುವ ಜನಪ್ರತಿನಿಧಿಗಳು ತಾಲ್ಲೂಕಿನ ಪ್ರಗತಿಗೆ ಹೆಚ್ಚು ಶ್ರಮ ವಹಿಸುತ್ತಿಲ್ಲ. ವಲಸೆ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ತಾಂತ್ರಿಕ ಉನ್ನತ ಶಿಕ್ಷಣ ಇಂದಿಗೂ ಮರೀಚಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಿಂದ ಸಮ್ಮೇಳನಾಧ್ಯಕ್ಷರ ಪುರ ಮೆರವಣಿಗೆ ಪ್ರಾರಭವಾಗಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ವೃತ್ತ ಮತ್ತು ಮುಖ್ಯ ರಸ್ತೆಯ ಮೂಲಕ ಸಾಗಿ ವೇದಿಕೆಯಲ್ಲಿ ಕೊನೆಗೊಂಡಿತು. ಸಮ್ಮೇಳನದ ಭಾಗವಾಗಿ ಧ್ವಜಾರೋಹಣ, ವಿಚಾರಗೋಷ್ಠಿ, ವಿಶೇಷ ಗೋಷ್ಠಿ ಕವಿಗೋಷ್ಠಿ, ಸಮಾರೋಪ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಗಳು ನೆರವೇರಿದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


