ಗುಬ್ಬಿ (ತುಮಕೂರು): ತಾಲೂಕಿನ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆಯ ವಿವರ: ಶುಕ್ರವಾರ ಬೆಳಿಗ್ಗೆ ಜಮೀನಿನ ಮಾಲೀಕರು ತಮ್ಮ ತೋಟಕ್ಕೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತೆಂಗಿನ ಮರದ ಮೇಲಿದ್ದ ಚಿರತೆಯನ್ನು ಗಮನಿಸಿದ್ದಾರೆ. ತಕ್ಷಣ ಅವರು ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತೆಂಗಿನ ಮರದ ಮೇಲೆ ಚಿರತೆ ಕುಳಿತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಲು ಆರಂಭಿಸಿದರು.
ಆದರೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದರೊಳಗೆ ಚಿರತೆಯು ಮರದಿಂದ ಕೆಳಕ್ಕೆ ಜಿಗಿದು ಪೊದೆಗಳ ಕಡೆಗೆ ಓಡಿ ನಾಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಲು ಗ್ರಾಮದ ಆಯಕಟ್ಟಿನ ಜಾಗದಲ್ಲಿ ಅರಣ್ಯ ಇಲಾಖೆಯು ಬೋನು ಇರಿಸಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


