ತುಮಕೂರು: ಈಗ ಭೂಮಿಯ ಬೆಲೆ ಚಿನ್ನದ ಬೆಲೆಯಾಗಿದೆ. ರೈತರು ತಮ್ಮ ಜಮೀನು ಮಾರಾಟ ಮಾಡಿಕೊಳ್ಳಬೇಡಿ, ಮಕ್ಕಳ ಮದುವೆ ಅಥವಾ ಸಂಸಾರದ ಸಮಸ್ಯೆಗಳಿಗೆಂದು ಜಮೀನು ಮಾರಿಕೊಂಡರೆ ಮತ್ತೆ ಗಳಿಸುವುದು ಕಷ್ಟವಾಗುತ್ತದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ರೈತರಿಗೆ ಕಿವಿಮಾತು ಹೇಳಿದರು.
ಕ್ಷೇತ್ರದ ನಾಗವಲ್ಲಿಯಲ್ಲಿ ಕೊಳವೆ ಬಾವಿ ಕೊರೆಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಪಂಪು, ಮೋಟಾರ್ ವಿತರಣೆ ಮಾಡಿ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಬಹುತೇಕ ಕೆರೆಗಳು ತುಂಬಿ ಅಂತರ್ಜಲ ಮಟ್ಟದ ಹೆಚ್ಚಾಗಿದೆ. ರೈತರು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ತಮ್ಮ ಜಮೀನು ಮಾರದೆ ಉಳಿಸಿಕೊಂಡು ವ್ಯವಸಾಯ ಮುಂದುವರೆಸಿ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ತಮ್ಮ ಕ್ಷೇತ್ರಕ್ಕೆ ಬೇಕಾದ ಅನುದಾನ ತರಲು ಪರಿಶ್ರಮ ಪಡುತ್ತಿದ್ದೇನೆ. ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವ ಬೋಸರಾಜು ಅವರು ಸಹಕಾರದಿಂದ ಕ್ಷೇತ್ರದ ಫಲಾನುಭವಿಗಳಿಗೆ ಪಂಪು, ಮೋಟಾರ್ ಮಂಜೂರು ಮಾಡಿಸಿ ತಂದು ವಿತರಣೆ ಮಾಡುತ್ತಿದ್ದೇನೆ. ರಾಜ್ಯದ ಎಲ್ಲಾ ಸಚಿವರ ಜೊತೆ ಸಚಿವ ಸೋಮಣ್ಣನವರಿಗೆ ಒಳ್ಳೆಯ ಬಾಂಧವ್ಯವಿದೆ. ಈ ಯೋಜನೆಗೆ ನೆರವಾದ ಇಬ್ಬರೂ ಸಚಿವರಿಗೆ ಧನ್ಯವಾದ ಹೇಳಿದ ಸುರೇಶ್‌ಗೌಡರು, ಒಳ್ಳೆಯ ಕಂಪನಿಯ ಗುಣಮಟ್ಟದ ಪಂಪು, ಮೋಟಾರ್ ಹಾಗೂ ಕೇಬಲ್ ವಿತರಿಸುತ್ತಿದ್ದು ಫಲಾನುಭವಿ ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕ್ಷೇತ್ರದ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಮಾದರಿ ಶಾಲೆ ಮಾಡುತ್ತಿದ್ದೇನೆ, ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಮಾದರಿ ಶಾಲೆಗಳ ಸ್ಥಾಪನೆ ಗುರಿ ಹೊಂದಿದ್ದೇನೆ, ನಮ್ಮ ಶಾಲೆಗಳು ದೇಶಕ್ಕೆ ಮಾದರಿಯಾಗಬೇಕು ಎಂಬುದು ನನ್ನ ಅಭಿಲಾಷೆ ಎಂದರು.
ನಾಗವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ, ಹೊಳಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಅಂಜನಪ್ಪ, ಮುಖಂಡರಾದ ಸಿದ್ದೇಗೌಡ, ರಾಜಶೇಖರ್, ವಿಜಯಕುಮಾರ್, ನಟರಾಜು, ನರಸಿಂಹಮೂರ್ತಿ, ಶಂಕರಣ್ಣ, ಸುಮಿತ್ರಮ್ಮ, ಊರ್ಡಿಗೆರೆ ರವಿ, ನೀಲಕಂಠಪ್ಪ, ಸೋಮಶೇಖರ್, ರವೀಂದ್ರ, ಗಿರೀಶ್, ಸುದರ್ಶನ್, ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಪುಟ್ಟಸ್ವಾಮಿ, ಗುತ್ತಿಗೆದಾರ ಗಂಗಾಧರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


