ತುಮಕೂರು: 2.4 ಎಕರೆ ಜಮೀನನ್ನು ತಂದೆಯಿಂದ ತಮ್ಮ ಹೆಸರಿಗೆ ಬರೆಯಿಸಿ ಕೊಂಡು ನಂತರ ತಂದೆ ತಾಯಿಯನ್ನು ಆರೈಕೆ ಮಾಡದೇ, ಅಮಾನವೀಯತೆ ಮೆರೆದಿದ್ದ ಪುತ್ರಿಯರಿಗೆ ಇದೀಗ ಪೋಷಕರು ಕಾನೂನಿನ ಮೂಲಕ ಬಿಸಿಮುಟ್ಟಿಸಿದ್ದು, ಇದೀಗ ಪೋಷಕರು ನೀಡಿದ್ದ ಗಿಫ್ಟ್ ಡೀಡ್ ಆಸ್ತಿಯನ್ನು ಹೈಕೋರ್ಟ್ ಪೋಷಕರಿಗೆ ಮರಳಿಸಿದೆ.
2.4 ಎಕರೆ ಜಮೀನನ್ನು ಇಬ್ಬರು ಪುತ್ರಿಯರು ತಮ್ಮ ಹೆಸರಿಗೆ ಬರೆದ ನಂತರ ತಮ್ಮನ್ನು ನಿರ್ಲಕ್ಷಿಸಿರುವ ಬಗ್ಗೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ವೆಂಕಟಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕ ಸದಸ್ಯ ಪೀಠ 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ನ್ನು ರದ್ದುಗೊಳಿಸಿದೆ. ಜೊತೆಗೆ ಹಿರಿಯ ನಾಗರಿಕರಿಗೆ ಅವರ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ, ಅವರ ಜೀವನ ನಿರ್ವಹಣೆಗೆ ನೆರವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಿದೆ ಎಂದು ಹೇಳಿದೆ.
ಪ್ರಕರಣವು ನ್ಯಾಯಮಂಡಳಿ, ಜಿಲ್ಲಾಧಿಕಾರಿಗಳ ವಿಚಾರಣೆ ಹಂತದಲ್ಲಿದ್ದಾಗ ಅಧಿಕಾರಿಗಳು ಅಳವಡಿಸಿಕೊಂಡ ವ್ಯಾಖ್ಯಾನವನ್ನು ಹೈಕೋರ್ಟ್ ಒಪ್ಪಿಲ್ಲ. ಗಿಫ್ಟ್ ಡೀಡ್ ಎಂಬುದು ಸ್ಪಷ್ಟವಾದ ನಿರ್ವಹಣಾ ಷರತ್ತು ಕಾಯ್ದೆಯ ಸೆಕ್ಷನ್ 23(1) ರಡಿಯಲ್ಲಿ ಕಡ್ಡಾಯ ಅವಶ್ಯಕತೆಯಿಲ್ಲ. ಒಂದು ವೇಳೆ ಇಂತಹ ಪ್ರಕರಣ ಎದುರಾದರೆ, ಅವುಗಳ ಸಂಗತಿ, ಸಂದರ್ಭ ಮತ್ತು ನಡವಳಿಕೆಯಿಂದ ಊಹಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ಕಾನೂನುಬದ್ಧವಾಗಿ ದೋಷಪೂರಿತ ಮತ್ತು ಕಾಯ್ದೆಯ ತಪ್ಪು ತಿಳುವಳಿಕೆ ಆಧರಿಸಿವೆ ಎಂದು ಹೇಳಿರುವ ನ್ಯಾಯಾಲಯ, ಇದು ವಯಸ್ಸಾದ ಪೋಷಕರು ಮತ್ತು ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆ ಮತ್ತು ಕೌಟುಂಬಿಕ ಬಂಧವನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.
ವೆಂಕಟಯ್ಯನವರ ವೃದ್ಧಾಪ್ಯ, ಗ್ರಾಮೀಣ ಹಿನ್ನೆಲೆ, ನಿಕಟ ಕುಟುಂಬ ಸಂಬಂಧ ಮತ್ತು ಆಸ್ತಿ ವರ್ಗಾವಣೆ ಬಳಿಕ ನಿರ್ಲಕ್ಷ್ಯವನ್ನು ಗಮನಿಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.
ಏನಿದು ಘಟನೆ?
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸುಮಾರು 2.4 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು. ಅವರು ತಮ್ಮ ಪುತ್ರಿಯರು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಭರವಸೆ ನೀಡಿದ ಬಳಿಕ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು.
ಬಳಿಕ ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರು. ಅಲ್ಲದೆ, ಹಿರಿಯ ನಾಗರಿಕರ ಕಾಯ್ದೆಯಡಿ, ತಮ್ಮ ಗಿಫ್ಟ್ ಡೀಡ್ ರದ್ದು ಕೋರಿ ಅವರು ಉಪ ವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು.
ನ್ಯಾಯಮಂಡಳಿಯು 2023 ಡಿ.19 ರಂದು ಅವರ ದೂರನ್ನು ವಜಾಗೊಳಿಸಿತು. ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿಬಂಧನೆಯನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತು. 2024ರ ಆ.22 ರಂದು ಜಿಲ್ಲಾಧಿಕಾರಿ ಕೂಡ ಅದೇ ಆದೇಶವನ್ನು ಎತ್ತಿ ಹಿಡಿದಿದ್ದರು.
ಹಾಗಾಗಿ ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರುಗಳು ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


