ತುಮಕೂರು: ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಗೂಳೂರು ಹೋಬಳಿಗೆ ಸೇರಿದ ಹೆತ್ತೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಬಂಗಾರದ ಚೆಲುವೆ, ಭವರೋಗವೈದ್ಯೆ ಮಕ್ಕಳ ತಾಯಿ ಎಂದೇ ಹೆಸರುವಾಸಿಯಾಗಿರುವ ಅನಾದಿಕಾಲದಿಂದಲೂ ಭಕ್ತರನ್ನು ಹರಸುತ್ತ ಬಂದಿರುವ ಕ್ಷೇತ್ರಮಾತೆ ಶ್ರೀ ಆದಿಶಕ್ತಿ ಮಾರಮ್ಮನವರ ಜಾತ್ರಾ ಮಹೋತ್ಸವ ಫೆಬ್ರವರಿ 16 ಮತ್ತು 17ರಂದು ನಡೆಯಲಿದೆ.
ಗ್ರಾಮದ ಮನೆಮನೆಗಳನ್ನು ದೇವಾಲಯಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣಗಳೊಂದಿಗೆ ಅಲಂಕರಿಸಿ ದಿನಾಂಕ 14 ರಂದು ಅಮ್ಮನವರನ್ನು ತವರುಮನೆ ಕಂಬತ್ತನಹಳ್ಳಿಗೆ ಕಳುಹಿಸಿಕೊಡಲಾಗುವುದು. ಸುತ್ತಮುತ್ತಲ ಗ್ರಾಮಗಳಾದ ಹೆತ್ತೇನಹಳ್ಳಿ ಪಾಳ್ಯ, ಕುಮ್ಮಂಜಪಾಳ್ಯ, ರಂಗಯ್ಯನಪಾಳ್ಯ, ಕಂಬತ್ತನ ಹಳ್ಳಿಗಳ ಭಕ್ತರಿಂದ ಪೂಜೆ ಸ್ವೀಕರಿಸಿ 15ರ ಭಾನುವಾರ ಹೆತ್ತೇನಹಳ್ಳಿಗೆ ಹೂವಿನ ಹಾರ ತುಂಬಿದ ವಧುವಿನಂತೆ ಸಿಂಗರಿಸಿ ಕಳುಹಿಸಿಕೊಡಲಾಗುವುದು. ಈ ದೃಶ್ಯವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಭಾಗ್ಯ ಎನ್ನುತ್ತಾರೆ ಭಕ್ತರು.
ಫೆ. 16ರ ಸೋಮವಾರ ರಥವನ್ನು ಬಣ್ಣ ಬಣ್ಣದ ವಸ್ತ್ರ ಧ್ವಜಗಳಿಂದ ಸಿದ್ಧಗೊಳಿಸಿ ಅಲಂಕೃತಗೊಳಿಸಲಾಗುವುದು. ಅಗ್ನಿಕೊಂಡವನ್ನು ಸಿದ್ಧಪಡಿಸಲಾಗುವುದು. ಇದರ ಜೊತೆಗೆ, ಗುಗ್ಗಿರಿ ಪೂಜೆ, ಕಿಚ್ಚು ಹಾಯುವುದು, ತುಂಬೆ ಹೂವಿನ ವಿಶೇಷ ಪೂಜೆ ನೆರವೇರಿಸಿ ಸೋಮವಾರ ರಾತ್ರಿ ದೂತರಾಯನ ಉತ್ಸವ, ಕರಡೆ ವಾದ್ಯ, ಚಿಟ್ಟೆಮೇಳ, ಸೋಮನ ಕುಣಿತ, ವೀರಗಾಸೆ, ಭದ್ರಕಾಳಿ ಕುಣಿತ ಮುಂತಾದ ಜನಪದ ತಂಡಗಳ ಮೆರವಣಿಗೆಯೊಂದಿಗೆ ಮಂಗಳವಾರ ಮುಂಜಾನೆ 4 ಗಂಟೆಗೆ ರಥೋತ್ಸವವನ್ನು ಕರ್ನಾಟಕ ಸರ್ಕಾರದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆ ಸಹಯೋಗದೊಂದಿಗೆ ಭಕ್ತರು ನಡೆಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


