ಕುಣಿಗಲ್: ಗ್ರಾಮೀಣ ಭಾಗದ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ರೈತರನ್ನು ಮದುವೆಯಾಗುವ ಯುವತಿಯರಿಗೆ ವಿಶೇಷ ಆರ್ಥಿಕ ಪ್ರೋತ್ಸಾಹ ಧನ ಘೋಷಿಸುವಂತೆ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮುಂಬರುವ 2026–27ರ ರಾಜ್ಯ ಬಜೆಟ್ ನಲ್ಲಿ ಈ ಯೋಜನೆಯನ್ನು ಸೇರಿಸುವಂತೆ ಮನವಿ ಮಾಡಿದ್ದಾರೆ.
ವಧುಗಳ ಕೊರತೆ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವತಿಯರು ರೈತರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ನಗರ ಪ್ರದೇಶದ ಉದ್ಯೋಗಸ್ಥರನ್ನು ಮದುವೆಯಾಗಲು ಬಯಸುತ್ತಿರುವುದರಿಂದ ಕೃಷಿ ನಂಬಿದ ಯುವಕರಿಗೆ ಮದುವೆಯಾಗುವುದು ಕಷ್ಟವಾಗುತ್ತಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನೆರವು: “ಯುವತಿಯರು ರೈತರನ್ನು ಮದುವೆಯಾಗಿ ಹಳ್ಳಿಗಳಿಗೆ ಬರಲು ಸಿದ್ಧರಿಲ್ಲ ಎಂಬುದು ಕಹಿ ವಾಸ್ತವ. ಹೀಗಾಗಿ ಕೃಷಿ ಕುಟುಂಬಗಳ ಜೀವನ ಸುಧಾರಿಸಲು ಮತ್ತು ರೈತ ಯುವಕರ ಬೆಂಬಲಕ್ಕೆ ನಿಲ್ಲಲು ಸರ್ಕಾರ ಮುಂದಾಗಬೇಕು. ರೈತರನ್ನು ಮದುವೆಯಾಗುವ ಸೊಸೆಯಂದಿರಿಗೆ ಪ್ರೋತ್ಸಾಹ ಧನ ನೀಡಬೇಕು” ಎಂದು ರಂಗನಾಥ್ ಪ್ರತಿಪಾದಿಸಿದ್ದಾರೆ.
ಬಜೆಟ್‌ನಲ್ಲಿ ನಿರೀಕ್ಷೆ: ಮಾರ್ಚ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಲಿದ್ದು, ಅದರಲ್ಲಿ ರೈತ ಕುಟುಂಬಗಳ ಹಿತದೃಷ್ಟಿಯಿಂದ ಈ ವಿಶೇಷ ಯೋಜನೆಯನ್ನು ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ರೈತ ಸಂಘಟನೆಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ ಬೆನ್ನಲ್ಲೇ ಶಾಸಕ ರಂಗನಾಥ್ ಅವರು ಈ ವಿಭಿನ್ನ ಹಾಗೂ ಮಹತ್ವದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


