ತುಮಕೂರು: ಸುಪ್ರೀಂಕೋರ್ಟ್‌ನ ಆದೇಶದಂತೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು, ನೇರ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಅಕ್ಷಯ್ ಎಂ.ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುಳ ಅವರ ನೇತೃತ್ವದಲ್ಲಿ ನೂರಾರು ಹೊರಗುತ್ತಿಗೆ ನೌಕರರು ಜಿಲ್ಲಾಸ್ಪತ್ರೆಯಿಂದ ಟೌನ್‌ಹಾಲ್, ಅಶೋಕರಸ್ತೆ, ಚರ್ಚ್ ಸರ್ಕಲ್, ಗುಬ್ಬಿಸರ್ಕಲ್, ಶ್ರೀರಾಮನಗರ ರಸ್ತೆ, ಡಿ.ಹೆಚ್.ಓ ಕಚೇರಿ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸೇವಾಭದ್ರತೆ ಕಲ್ಪಿಸಿ:
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಎಂ.ಗೌಡ, ಆಯುಷ್ಮಾನ್, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ನಮ್ಮ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಸೇವಾ ಭದ್ರತೆಯ ಅನುಮಾನ ಮೂಡುವಂತೆ ಮಾಡಿದೆ. ಸರ್ಕಾರದ ಕೆಲಸ ಮಾಡುತ್ತಿರುವ ನಮ್ಮ ಸೇವೆಗೆ ಭದ್ರತೆ ನೀಡಬೇಕಾದ್ದು ಆಳುವ ಸರ್ಕಾರಗಳ ಜವಾಬ್ದಾರಿಯಾಗಿದೆ. ನಮಗೂ ಸಂಸಾರ, ಹೆಂಡತಿ, ಮಕ್ಕಳು, ಅವರ ಆರೋಗ್ಯ, ವಿದ್ಯಾಭ್ಯಾಸ, ಮನೆ ಖರ್ಚು, ವೆಚ್ಚಗಳನ್ನು ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿಯಿದೆ. ಹಾಗಾಗಿ ನಮ್ಮ ಸೇವೆಯನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ನಮ್ಮನ್ನು ನೇರ ಪಾವತಿಗೆ ಒಳಪಡಿಸಬೇಕು. ಹೊರಗುತ್ತಿಗೆ ನೌಕರರ ಬಗ್ಗೆ ಇರುವ ಗೊಂದಲವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳ ಮಾತನಾಡಿ, ಇತ್ತೀಚೆಗೆ ತುಮಕೂರನಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಹಂತದ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಅದರಂತೆ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳ, ರಾಜ್ಯ ಸಮಿತಿ ಸದಸ್ಯರಾದ ಸಿದ್ದಪ್ಪ, ರವೀಶ್, ಯೋಗೀಶ್, ತುಮಕೂರು ಜಿಲ್ಲಾಧ್ಯಕ್ಷ ಶಿವರಾಮ್, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಸೇರಿದಂತೆ ನೂರಾರು ಹೊರಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


