ತುರುವೇಕೆರೆ: ದೇವರು ಬಂದಂತೆ ನಾಟಕವಾಡಿ ನೂತನ ದಲಿತ ದಂಪತಿಯನ್ನು ಅವಮಾನಿಸಿ ದೇವಾಲಯದಿಂದ ಹೊರಕಳಿಸಿದ ಘಟನೆಗೆ ಸಂಬಂಧಿಸಿದಂತೆ ಕೃತ್ಯ ನಡೆಸಿದ ವ್ಯಕ್ತಿ ಹಾಗೂ ಸಹಚರರ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ತಾಲೂಕಿನ ಗೋಣಿ ತುಮಕೂರು ಗ್ರಾಮದ ಅರಸಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದಲಿತ ಜನಾಂಗದ ಯುವಕ ಹೊಸದಾಗಿ ಮದುವೆಯಾಗಿ ದಂಪತಿ ಅರಸಮ್ಮ ದೇವಾಲಯಕ್ಕೆ ಪೂಜೆಗೆ ಹೋಗಿದ್ದಾಗ ನಾರಾಯಣಪ್ಪ ಎಂಬ ವ್ಯಕ್ತಿ ದೇವಾಲಯದ ಒಳಗೆ ದೇವರು ಬಂದಂತೆ ನಟನೆ ಮಾಡಿ ದಲಿತರು ಒಳಗೆ ಬಂದರೆ ಪುಣ್ಯ ಮಾಡಿಸಬೇಕು ಎಂದು ದೇವಾಲಯದ ಒಳಗಿದ್ದ ದಲಿತ ಕುಟುಂಬವನ್ನು ಹೊರಕಳಿಸಿ ಅವಮಾನ ಮಾಡಿದ್ದ. ಈ ಎಲ್ಲ ನಾಟಕೀಯ ಬೆಳವಣಿಗೆಯನ್ನು ಮೊಬೈಲ್ ನಲ್ಲಿ ಸೆರೆ ಮಾಡಲಾಗಿತ್ತು.
ಈ ಘಟನೆಯಿಂದ ನೊಂದ ಜಗದೀಶ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಗ್ರಾಮದ ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಇತರರ ಮೇಲೆ ಎಸ್.ಸಿ., ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಪಿ.ಅಶೋಕ್ ಆದೇಶದ ಮೇರೆಗೆ, ಕುಣಿಗಲ್ ಪೊಲೀಸ್ ಉಪಾಧೀಕ್ಷಕ ಓಂಪ್ರಕಾಶ್ ನಿರ್ದೇಶನದಂತೆ, ಸಿಪಿಐ ಲೋಹಿತ್, ಪಿಎಸ್‌ಐ ಮೂರ್ತಿ ಟಿ. ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ಗ್ರಾಮಕ್ಕೆ ತಾಲೂಕು ತಹಶೀಲ್ದಾರ್ ಎಂ.ಎನ್. ಕುನ್ಹಿ ಅಹಮದ್, ಕುಣಿಗಲ್ ಉಪ ವಿಭಾಗದ ಉಪಾಧೀಕ್ಷಕ ಓಂ ಪ್ರಕಾಶ್, ತುರುವೇಕೆರೆ ವೃತ್ತ ನಿರೀಕ್ಷಕ ಬಿ.ಎನ್. ಲೋಹಿತ್, ಉಪನಿರೀಕ್ಷಕ ಮೂರ್ತಿ ಟಿ. ಭೇಟಿ ನೀಡಿ ಶಾಂತಿ ಸಭೆ ನಡೆಸಿ ಇನ್ನು ಮುಂದೆ ಗ್ರಾಮದಲ್ಲಿ ಇಂತಹ ಆಚರಣೆ ನಡೆಯದಂತೆ ಎಚ್ಚರಿಕೆ ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


