ತುಮಕೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 1, 2024ರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ತಮ್ಮ ಪರಮಾಧಿಕಾರವನ್ನು ಚಲಾಯಿಸಿ ಇದುವರೆಗೂ ನೊಂದ ಸಮುದಾಯಗಳು ನಡೆಸಿಕೊಂಡು ಬಂದಿರುವ ಅವಿಶ್ರಾಂತ ಸಂಘರ್ಷಕ್ಕೆ ಇತಿಶ್ರೀ ಹಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅದರಲ್ಲೂ ಸಂವಿಧಾನ ಪರ, ಸಾಮಾಜಿಕ ನ್ಯಾಯದ ಪರ, ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳಬಹುದೆಂದು ಯಾರೂ ಭಾವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಲು ಆಡಳಿತಾರೂಢ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಮಾದಾರ ಮಹಾಸಭಾ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯದ ಆಶಯದಂತೆ ಹಿಂದುಳಿದಿರುವಿಕೆಯೇ ಒಳಮೀಸಲಾತಿ ಹಂಚಿಕೆಯ ಮಾನ ದಂಡವಾಗಿದೆ. ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಿ ನೆನೆಗುದಿಗೆ ಬಿದ್ದಿರುವ ಅಸಂಖ್ಯಾತ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಮಾತ್ರ ಸರ್ವೋಚ್ಚ ನ್ಯಾಯಾಲಯದ ಯಾವೊಂದು ಮಾರ್ಗಸೂಚಿಗಳನ್ನು ಮಾಡದೆ, ನಿಖರ ದತ್ತಾಂಶಗಳನ್ನು ಗಂಭೀರವಾಗಿ ಪರಿಗಣಿಸದೆ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿ, ನೇಮಕಾತಿ ಆಗಬಹುದಾದ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಆಕ್ರೋಶಕ್ಕೆ ಗುರಿಯಾಗಿರುವುದು ಯಾರ ಪ್ರಭಾವಕ್ಕೆ ಮಣಿದು ಎನ್ನುವುದು ಗುಟ್ಟಿನ ವಿಚಾರವಾಗಿ ಉಳಿದಿಲ್ಲ. ಒಂದು ತಲೆಮಾರು ಒಳ ಮೀಸಲಾತಿ ಅಂಗೀಕಾರಕ್ಕೆ ತಮ್ಮ ಜೀವಿತಾವಧಿಯನ್ನು ಮೀಸಲಿಟ್ಟಿರುವಾಗ, ಇನ್ನು ಸಂಪೂರ್ಣ ಮೀಸಲಾತಿ ಅನುಷ್ಠಾನಕ್ಕಾಗಿ ಇನ್ನೆಷ್ಟು ತಲೆಮಾರುಗಳು ಬೀದಿ ಸಂಘರ್ಷ ಮಾಡಬೇಕು.
ಈ ಎಲ್ಲಾ ಅಂಶಗಳನ್ನು ಸರಿಪಡಿಸಬೇಕಾದ ಎಲ್ಲಾ ಅಧಿಕಾರವಿರುವುದು ಚುನಾಯಿತ ಶಾಸಕರು ಹಾಗೂ ಸಚಿವರಿಗೆ ಮಾತ್ರ. ಹಾಗಾಗಿ ಇದುವರೆಗೂ ನಡೆದಿರುವ ಎಡರು ತೊಡರುಗಳನ್ನು ಸರಿಪಡಿಸಲು ಈಗಲಾದರೂ ಸಚಿವರುಗಳು ಸರ್ಕಾರದ ಗಮನ ಸೆಳೆಯಲು ಮುಂದಿನ ಬಜೆಟ್ ಅಧಿವೇಶನದಲ್ಲಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂಬ ಆಶಯದೊಂದಿಗೆ ಫೆ.23ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು. ಸಮುದಾಯದ ಮುಖಂಡರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಳ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ದೊರೈರಾಜ್, ಅಧ್ಯಕ್ಷ ವೈ.ಕೆ.ಬಾಲಕೃಷ್ಣ, ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಕಾರ್ಯದರ್ಶಿ ಕೋಟ್ಟ ಶಂಕರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


