ತುಮಕೂರು : ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಜಿ. ಹರಿವೇಸಂದ್ರ ಗ್ರಾಮದಲ್ಲಿ ಬ್ರೈನ್ ಕ್ಯಾನ್ಸರ್ ಗೆ ತುತ್ತಾದ ಯೋಗಿತಾ ಎಂಬ ಬಾಲಕಿಯ ಆಧಾರ್ ಕಾರ್ಡ್ ತಾಂತ್ರಿಕ ಸಮಸ್ಯೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನಲೆ ಕೂಡಲೇ ಸ್ಪಂದಿಸಿದ ಜಿಲ್ಲಾಡಳಿತದ ಉಪ ವಿಭಾಗಾಧಿಕಾರಿ ನಹೀದಾ ಜಮ್ ಜಮ್ ಬಾಲಕಿಯ ಮನೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸ್ಥಳದಲ್ಲೇ ತಾಂತ್ರಿಕ ಸಮಸ್ಯೆ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಬ್ಬಿ ತಾಲ್ಲೂಕಿನ ಜಿ. ಹರಿವೇಸಂದ್ರ ಗ್ರಾಮಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ನೇರ ಯೋಗಿತಾ ಎಂಬ ಬಾಲಕಿಯ ಮನೆಗೆ ಭೇಟಿ ನೀಡಿ, ಸುಮಾರು ಒಂದು ಗಂಟೆ ಬಾಲಕಿಯ ಸಮಸ್ಯೆ ಆಲಿಸಿದರು. ಮಾರಕ ಕಾಯಿಲೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ಬಗ್ಗೆ ತೀವ್ರ ಮರುಕ ವ್ಯಕ್ತಪಡಿಸಿ ಆಧಾರ್ ಕಾರ್ಡ್ ತಿದ್ದುಪಡಿ ಆಗದ ಬಗ್ಗೆ ವಿಚಾರಿಸಿ ಜೊತೆಯಲ್ಲಿದ್ದ ತಾಂತ್ರಿಕ ಸಿಬ್ಬಂದಿಗಳಿಗೆ ಸರಿ ಪಡಿಸಲು ಸೂಚಿಸಿದರು.
ಇಡೀ ಮಂಜುನಾಥ್ ಕುಟುಂಬವನ್ನು ನಲುಗಿಸಿದ್ದ ಮಾರಕ ಮೆದುಳು ಕ್ಯಾನ್ಸರ್ ಗೆ ತುತ್ತಾದ ಬಾಲಕಿ ಯೋಗೀತಾಗೆ ಚಿಕಿತ್ಸೆಗೆ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇಲ್ಲದಿರುವುದು ಕುಟುಂಬಕ್ಕೆ ಆರ್ಥಿಕ ಹೊರೆಯಾಗಿದೆ. ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಬಿಪಿಎಲ್ ಕಾರ್ಡ್ ಗೆ ಬಾಲಕಿ ಹೆಸರು ಸೇರ್ಪಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆಧಾರ್ ಕಾರ್ಡ್ ನಿಪುಣತೆ ಪಡೆದ ಸಿಬ್ಬಂದಿಗಳನ್ನು ಮನೆಗೆ ಕರೆ ತಂದು ಮಗುವಿನ ಬಯೋ ಮೆಟ್ರಿಕ್ ಪಡೆದು ಆಧಾರ್ ಸಮಸ್ಯೆ ಬಗೆಹರಿಸಲು ಮುಂದಾದ ಉಪ ವಿಭಾಗಾಧಿಕಾರಿಗಳು ನಿಮ್ಮ ಮಗುವಿನ ಸಮಸ್ಯೆಗೆ ನಮ್ಮ ಜಿಲ್ಲಾಡಳಿತ ಜೊತೆ ನಿಲ್ಲಲಿದೆ ಎಂದು ಧೈರ್ಯ ತುಂಬಿದರು.
ಬಾಲಕಿಯ ಸ್ಥಿತಿ ಕಂಡು ಮರುಗಿದ ನಾಹೀದ ಜಮ್ ಜಮ್:
ಬಾಲಕಿ ಯೋಗಿತಾಳನ್ನು ಮಾತಾಡಿಸುತ್ತ ಓದಿ ಏನು ಆಗಲು ಬಯಸಿದ್ದೆ ಎನ್ನುವ ಪ್ರಶ್ನೆ ಕೇಳಿದರು. ಆಗ ಬಾಲಕಿ ನಾನು ಚೆನ್ನಾಗಿ ಓದಿ ಎಂಜಿನಿಯರ್ ಆಗಬೇಕೆಂದು ಇದ್ದೆ ಎಂಬ ಉತ್ತರ ನೀಡಿದಳು. ಆಗ ಉಪ ವಿಭಾಗಾಧಿಕಾರಿ ಕಣ್ಣಲ್ಲಿ ನೀರು ತುಂಬಿತ್ತು. ಸ್ಥಳದಲ್ಲಿದ್ದ ಎಲ್ಲರ ಕಣ್ಣಲ್ಲಿ ಕಂಬನಿ ಮಿಡಿದಿತ್ತು.
ಮುಂದಿನ ಚುನಾವಣೆ ಸಂದರ್ಭಗಳಲ್ಲಿ ನಡೆಯುವ ಎಲ್ಲಾ ಪ್ರಚಾರಗಳಿಗೆ ನಿನ್ನನ್ನು ವಾರಿಯರ್ ಆಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿ, ಆಧಾರ್ ಕಾರ್ಡ್ ಸಿದ್ಧವಾದ ತಕ್ಷಣ ಆಹಾರ ನಿರೀಕ್ಷಕರಿಗೆ ಮೊಬೈಲ್ ಕರೆ ಮಾಡಿ ಬಿಪಿಎಲ್ ಕಾರ್ಡ್ ಗೆ ಮಗುವಿನ ಹೆಸರು ಸೇರಿಸಿ ಖುದ್ದು ಈ ಕುಟುಂಬಕ್ಕೆ ಕಾರ್ಡ್ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರತಿ.ಬಿ, ಗ್ರಾಮ ಆಡಳಿತಾಧಿಕಾರಿ ಸ್ವಾಮಿ, ಆಧಾರ್ ಕಾರ್ಡ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರಶಾಂತ್, ಆಪರೇಟರ್ ಗಂಗಾ,ಆಶಾ ಕಾರ್ಯಕರ್ತೆ,ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


