ತುಮಕೂರು: ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು, “ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ,”ನಮ್ಮೂರ ಸರ್ಕಾರಿ ಶಾಲೆ ಉಳಿಸಿ” ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪೂರ್ವ, ರಾಜ್ಯ ಉಪಾಧ್ಯಕ್ಷರು, “ರಾಜ್ಯ ಸರ್ಕಾರದ ‘ಕೆಪಿಎಸ್–ಮ್ಯಾಗ್ನೆಟ್’ ಯೋಜನೆಯಡಿ ರಾಜ್ಯದ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲು ಹೊರಟಿರುವ ಕ್ರಮವನ್ನು ಖಂಡಿಸಿ, 01 ಮಾರ್ಚ್ 2026 ರಂದು ತುಮಕೂರಿನ ಟೌನ್ ಹಾಲ್ ಎದುರು ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ರಾಜ್ಯದ 47,174 ಶಾಲೆಗಳ ಪೈಕಿ ಕೇವಲ 5,900 ಶಾಲೆಗಳು ಮಾತ್ರ ಉಳಿಯಲಿದ್ದು, ತುಮಕೂರು ಜಿಲ್ಲೆಯಲ್ಲೇ 1,500ಕ್ಕೂ ಹೆಚ್ಚು ಶಾಲೆಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನಿಂದ ಸಾಲ ಪಡೆದು ಕಾರ್ಪೊರೇಟ್ ಹಿತಾಸಕ್ತಿಗಾಗಿ ಬಡವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಈ ಹುನ್ನಾರದ ವಿರುದ್ಧ ಈಗಾಗಲೇ ಜಿಲ್ಲೆಯ ಮಸ್ಕಲ್, ಹೆಗ್ಗೆರೆ, ಸಮುದ್ರನಹಳ್ಳಿ, ಬ್ರಹ್ಮಸಂದ್ರ, ಕೊರಟಗೆರೆ ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ಪ್ರತಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಿ, ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಗಳ ಮೂಲಕ ಹೋರಾಟ ತೀವ್ರಗೊಂಡಿದೆ. ಸಾರ್ವತ್ರಿಕ ಶಿಕ್ಷಣದ ಆಶಯವನ್ನು ಎತ್ತಿಹಿಡಿಯಲು ಮತ್ತು ಹಳ್ಳಿ ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಈ ಪ್ರತಿಭಟನಾ ಸಮಾವೇಶದಲ್ಲಿ ಜಿಲ್ಲೆಯ ಸಮಸ್ತ ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪನವರು ನಡೆಸಿಕೊಟ್ಟರು. ಜಿಲ್ಲಾ ಕಾರ್ಯಕರ್ತರಾದ, ಭರತ್, ಸಯ್ಯದ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


