ಶಿವಮೊಗ್ಗ: ಇರಾನ್ ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ಅವರು ‘ದ್ವಂದ್ವ ನೀತಿ’ ಎಂದು ಟೀಕಿಸಿದ್ದಾರೆ.
ಶಿವಮೊಗ್ಗದ ಊರಗಡೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಬಾಲಕನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರತಿಕ್ರಿಯೆ ನೀಡಿದರು.
ಆಯತೊಲ್ಲಾ ಖಮೇನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಹತ್ಯೆಯು ಅತ್ಯಂತ ಖಂಡನೀಯ ಮತ್ತು ಈ ಯುದ್ಧದ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಟ್ರಂಪ್ ವಿರುದ್ಧ ಟೀಕೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದು ಕಡೆ ಶಾಂತಿಯ ಮಂತ್ರ ಜಪಿಸುತ್ತಾ, ಮತ್ತೊಂದೆಡೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಸಿಎಂ ಕಿಡಿಕಾರಿದರು.
ಕನ್ನಡಿಗರ ರಕ್ಷಣೆ: ಇರಾಕ್ ಮತ್ತು ಇರಾನ್ ಪ್ರಾಂತ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಭರವಸೆ ನೀಡಿದರು.
ವಿಪಕ್ಷಗಳಿಗೆ ಟಾಂಗ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸ” ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


