ಬಳ್ಳಾರಿ: ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಸಿದ್ಧಾಂತ ಶಿಖಾಮಣಿಯ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷಣೆಯ ಮೂಲಕ ವಿಶ್ವಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಧರ್ಮವು ಭಗವಂತ ಮತ್ತು ಭಕ್ತನ ನಡುವೆ ನೇರ ಸಂಪರ್ಕವನ್ನು ಒದಗಿಸಿ ಇಷ್ಟಲಿಂಗದ ಮಹತ್ವವನ್ನು ಸಾರಿದ ಮಹಾನ್ ಚೇತನ ರೇಣುಕಾಚಾರ್ಯರು. ವಿಜ್ಞಾನವಿಲ್ಲದ ಧರ್ಮ ಕುರುಡು; ಧರ್ಮವಿಲ್ಲದ ವಿಜ್ಞಾನ ಕುಂಟು. ವೀರಶೈವ ಧರ್ಮದಲ್ಲಿ ವಿಜ್ಞಾನವೂ ಇದೆ, ಆಚರಣೆಯೂ ಇದೆ ಎಂದು ತಿಳಿಸಿದರು. ಪಂಚಗಣಾಧೀಶ್ವರರು ಪರಮಾತ್ಮನ ಆದೇಶದಂತೆ ಅವತರಿಸಿ ವೀರಶೈವ ಧರ್ಮವನ್ನು ಸ್ಥಾಪಿಸಿದರು. ಅಷ್ಟಾಕಿರಣ, ಪಂಚಾಚಾರ, ಷಟಸ್ಥಳ ತತ್ವಗಳನ್ನು ಜಗದ್ಗುರು ಶ್ರೀ ರೇಣುಕಾಚಾರ್ಯರು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.
ಕಾಶಿಯಿಂದ ಲಿಂಗ ತಂದು ಎತ್ತಿನ ಮೇಲೆ ಮೆರವಣಿಗೆ ಮಾಡಿದಾಗ ಜನರು ಗೌರವ ತೋರಿದ್ದು ಎತ್ತಿಗೆ ಅಲ್ಲ, ಅದರ ಮೇಲಿದ್ದ ಲಿಂಗಕ್ಕೆ ಎಂಬ ಉದಾಹರಣೆ ನೀಡಿ, ಲಿಂಗಧಾರಣೆಯ ಮಹತ್ವವನ್ನು ವಿವರಿಸಿದ ಅವರು, ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿರುವುದು ಗೌರವದ ಸಂಕೇತ ಎಂದು ಅವರು ಹೇಳಿದರು.
ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮಾತನಾಡುವುದೇ ಸಾಧನೆಯಾಗಬಾರದು; ಸಾಧನೆಗಳು ಮಾತನಾಡಬೇಕು. ಧರ್ಮ ಉಳಿಯಬೇಕಾದರೆ ಆಚರಣೆ ಮತ್ತು ಸಂಸ್ಕಾರ ಅಗತ್ಯವೆಂದು ಅವರು ತಿಳಿಸಿದರು.
ಸಮಾಜದ ಹಿರಿಯ ಮುಖಂಡ ಪಲ್ಲೇದ ಪಂಪಾಪತಿ ಅವರು ಮಾತನಾಡಿ, ರೇಣುಕಾಚಾರ್ಯರು ಮಹಾನ್ ದೈವಪುರುಷರು. ಇಂತಹ ಪೂಜ್ಯರ ಜಯಂತಿಯನ್ನು ಪ್ರತಿವರ್ಷ ಆಚರಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಸಿದ್ಧಾಂತ ಶಿಖಾಮಣಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸಂಭ್ರಮದ ಮೆರವಣಿಗೆ:
ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಭಾನುವಾರ ನಗರದಲ್ಲಿ ಭಕ್ತಿಭಾವದಿಂದ ಹಾಗೂ ಧಾರ್ಮಿಕ ವೈಭವದಿಂದ ನೆರವೇರಿತು.
ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ– ರೈಲ್ವೇ ನಿಲ್ದಾಣ ರಸ್ತೆ– ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ– ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ನಾಗಭೂಷಣಗೌಡ, ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಹಿರಿಯ ಮುಖಂಡರು, ಸಮಾಜದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


