ತುಮಕೂರು: ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಟವಾಡಿ ಮತ್ತು ಮಲ್ಲಸಂದ್ರ ನಡುವೆ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಈ ಯೋಜನೆಯಲ್ಲಿ ಮೊದಲು ಭೀಮಸಂದ್ರದಲ್ಲಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಬೇಕು, ನಂತರ ನಗರದ ಕಡೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಹೊರವಲಯದ ರಂಗಾಪುರ ಬಳಿ ನಡೆಯುತ್ತಿರುವ ಮೇಲುಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಿದರು.
ನಗರದ ಹೃದಯಭಾಗದಲ್ಲಿ ಹೆದ್ದಾರಿಗಳು ಹಾದುಹೋಗಿದ್ದು, ರಸ್ತೆಗಳ ಕೆಳಗೆ ನೀರು ಮತ್ತು ಒಳಚರಂಡಿ ಪೈಪ್‌ಲೈನ್‌ಗಳಿವೆ. ಆದ್ದರಿಂದ ಯಾವುದೇ ಹೊಸ ಯೋಜನೆ ಅಥವಾ ದುರಸ್ತಿ ಕಾರ್ಯ ಮಾಡುವಾಗ ಪಾಲಿಕೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಕಡ್ಡಾಯ ಎಂದು ತಿಳಿಸಿದರು.
ಅಂತರಸನಹಳ್ಳಿ ಮತ್ತು ದೇವರಾಯಪಟ್ಟಣದ ಕೆಳಸೇತುವೆಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆಯಿದೆ. ಮಳೆಗಾಲ ಆರಂಭವಾಗುವ ಮೊದಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಎಚ್ಚರಿಸಿದರು.
ಭೂಸ್ವಾಧೀನ ಪ್ರಕ್ರಿಯೆ: ಶಿರಾಗೇಟ್‌ನ 150 ಅಡಿ ರಸ್ತೆಗೆ ಅಡ್ಡಿಯಾಗಿರುವ ಅಂಗಡಿ ಮತ್ತು ಮನೆಗಳನ್ನು ಗುರುತಿಸಲಾಗಿದ್ದು, ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಟೂಡಾ (TUDA) ಆಯುಕ್ತರಿಗೆ ಆದೇಶಿಸಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಟೂಡಾ ಆಯುಕ್ತ ಉಮೇಶ್‌ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅನುಪ್ ಶರ್ಮ ಹಾಗೂ ವಿವಿಧ ಇಲಾಖೆಗಳ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


