ತುಮಕೂರು: ಜಿಲ್ಲೆಯ ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಅವರು ಬುಧವಾರ ಬೆಳಿಗ್ಗೆ ನಾಪತ್ತೆಯಾಗಿ, ಮಧ್ಯಾಹ್ನದ ವೇಳೆಗೆ ಸಿದ್ಧಗಂಗಾ ಮಠದಲ್ಲಿ ಪತ್ತೆಯಾಗಿದ್ದಾರೆ.
ಬುಧವಾರ ಬೆಳಿಗ್ಗೆ ಸುಮಾರು 5 ಗಂಟೆಗೆ ಬೆಳ್ಳಾವಿ ಮಠದಿಂದ ಯಾರಿಗೂ ತಿಳಿಸದೆ, ಕಾಲ್ನಡಿಗೆಯಲ್ಲೇ ಹೊರಟಿದ್ದ ಶ್ರೀಗಳು ಸುಮಾರು 15 ಕಿ.ಮೀ. ನಡೆದುಕೊಂಡು ಸಿದ್ಧಗಂಗಾ ಮಠಕ್ಕೆ ಬಂದು ತಲುಪಿದ್ದರು. ಮಠದಲ್ಲಿ ಸ್ವಾಮೀಜಿ ಕಾಣಿಸದಿದ್ದಾಗ ಆತಂಕಗೊಂಡ ಭಕ್ತರು ಮತ್ತು ಮಠದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಅವರು ಯಾವುದೇ ವಾಹನ ಬಳಸದೆ ಮತ್ತು ಮೊಬೈಲ್ ಕೂಡ ಕೊಂಡೊಯ್ಯದೆ ತೆರಳಿದ್ದರಿಂದ ಆತಂಕ ಹೆಚ್ಚಾಗಿತ್ತು.
ಮೂಲಗಳ ಪ್ರಕಾರ, ಇತ್ತೀಚೆಗೆ ನಡೆದ ಬೆಳ್ಳಾವಿ ಜಾತ್ರೆಯ ಸಂದರ್ಭದಲ್ಲಿ ಮಠದ ಆವರಣದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರವಾಗಿ ಕೆಲವರು ಸ್ವಾಮೀಜಿಯವರ ಜೊತೆ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಸಿ.ಸಿ ಟಿ.ವಿ ದೃಶ್ಯಾವಳಿ ನೀಡುವಂತೆ ಒತ್ತಡ ಹೇರಿ ಕಿರುಕುಳ ನೀಡಿದ್ದರಿಂದ ಮನನೊಂದು ಅವರು ಮಠ ಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಶ್ರೀಗಳ ಸ್ಪಷ್ಟನೆ:
ಸಿದ್ಧಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, “ನಾನು ಗಲಾಟೆಯಿಂದ ಮನನೊಂದು ಬಂದಿಲ್ಲ. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮೊದಲಿನಿಂದಲೂ ಮಠಕ್ಕೆ ಬರುವಂತೆ ಆಹ್ವಾನಿಸುತ್ತಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಅವರು ಹೇಳುವವರೆಗೂ ನಾನು ಇಲ್ಲೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀಗಳು ಸುರಕ್ಷಿತವಾಗಿ ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


