ಬೆಂಗಳೂರು: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಸುಮಾರು 20 ಕಾಂಗ್ರೆಸ್ ಶಾಸಕರ ತಂಡ ಬುಧವಾರ (ಮಾರ್ಚ್ 4) ಮುಂಜಾನೆ ಬೆಂಗಳೂರಿಗೆ ವಾಪಸ್ಸಾಗಿದೆ. ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಮತ್ತು ಬಜೆಟ್ ಮಂಡನೆಯ ಸಿದ್ಧತೆಗಳ ನಡುವೆ ಶಾಸಕರ ಈ ಪ್ರವಾಸ ತೀವ್ರ ಕುತೂಹಲ ಮೂಡಿಸಿತ್ತು.
ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕರ ತಂಡದಲ್ಲಿ ಎಚ್.ಡಿ. ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಪ್ರಮುಖರಿದ್ದರು. ಮಾಧ್ಯಮಗಳನ್ನು ಕಂಡ ತಕ್ಷಣ ಬಹುತೇಕ ಶಾಸಕರು ತರಾತುರಿಯಲ್ಲಿ ಕಾರು ಹತ್ತಿ ನಿರ್ಗಮಿಸಿದರು.
ಈ ಪ್ರವಾಸದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇದು ಕೇವಲ ವೈಯಕ್ತಿಕ ಮತ್ತು ಕುಟುಂಬದೊಂದಿಗಿನ ಪ್ರವಾಸವೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕ ಬಿ.ಎಂ. ನಾಗರಾಜ್: “ನಾವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಬಂದಿದ್ದೇವೆ. ಇದು ಫ್ಯಾಮಿಲಿ ಟ್ರಿಪ್ ಆಗಿದ್ದರಿಂದ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಇದು ಸರ್ಕಾರಿ ಪ್ರವಾಸವಲ್ಲದ ಕಾರಣ ಕೆಲವು ಸ್ಥಳಗಳಿಗೆ ನಮಗೆ ಪ್ರವೇಶ ಸಿಗಲಿಲ್ಲ. ನಮ್ಮ ಯಾವ ನಾಯಕರೂ ನಮಗೆ ಕರೆ ಮಾಡಿಲ್ಲ,” ಎಂದು ತಿಳಿಸಿದರು.
ಶಾಸಕ ದೇವೇಂದ್ರಪ್ಪ: “ವಿದೇಶಕ್ಕೆ ಹೋಗಿ ನಾವು ಏನು ರಾಜಕೀಯ ಮಾಡಲು ಸಾಧ್ಯ? ಅಲ್ಲಿನ ಹೈನುಗಾರಿಕೆ ಮತ್ತು ಕಾನೂನು ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿದ್ದೇವೆ. ನಮ್ಮ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. ರಾಜಕೀಯ ಮಾಡುವುದೇ ಆಗಿದ್ದರೆ ನಾವು ಮಾಧ್ಯಮಗಳ ಕಣ್ಣಿಗೆ ಬೀಳುತ್ತಿರಲಿಲ್ಲ,” ಎಂದರು.
ಪುಟ್ಟರಂಗಶೆಟ್ಟಿ: “ಅಲ್ಲಿನ ರಸ್ತೆಗಳ ನಿರ್ವಹಣೆ ಮತ್ತು ಹೈನುಗಾರಿಕೆಯನ್ನು ಗಮನಿಸಿದ್ದೇವೆ. ಅದನ್ನು ನಮ್ಮಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತೇನೆ,” ಎಂದು ಹೇಳಿದರು.
ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದು, ಅದಕ್ಕೆ ಮುನ್ನವೇ ಶಾಸಕರು ಮರಳಿರುವುದು ಮಹತ್ವ ಪಡೆದಿದೆ. ವಿದೇಶ ಪ್ರವಾಸದ ಮೂಲಕ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆಯೇ ಅಥವಾ ಇದು ಕೇವಲ ವಿಹಾರವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


