ಬೆಂಗಳೂರು: ಬಜೆಟ್ ನಲ್ಲಿ ಸಾಲದ ಪ್ರಮಾಣ ಹೆಚ್ಚಳವಾಗಿದೆ ಎಂಬ ಬಿಜೆಪಿ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಾಲವಿಲ್ಲದೆ ಜಗತ್ತಿನ ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಾಲದ ಕುರಿತು ಅಂಕಿ-ಅಂಶಗಳ ಸಮೇತ ಬಿಜೆಪಿಗೆ ತಿರುಗೇಟು ನೀಡಿದರು.
ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆ (KFRA) ಅಡಿಯಲ್ಲಿ ನಿಗದಿಪಡಿಸಲಾದ ಮಿತಿಯ ಒಳಗಡೆಯೇ ರಾಜ್ಯ ಸರ್ಕಾರ ಸಾಲ ಪಡೆಯುತ್ತಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ (2014) ದೇಶದ ಸಾಲ 53.11 ಲಕ್ಷ ಕೋಟಿ ರೂ. ಇತ್ತು, ಈಗ ಅದು 165 ಲಕ್ಷ ಕೋಟಿ ರೂ. ದಾಟಿದೆ. ಈ ವರ್ಷದ ಕೇಂದ್ರದ ಒಟ್ಟು ಸಾಲ 218 ಲಕ್ಷ ಕೋಟಿ ರೂ. ತಲುಪಿದೆ. ಹೀಗಿರುವಾಗ ನಮ್ಮನ್ನು ಪ್ರಶ್ನಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಮತ್ತು ಅನುದಾನ ಸರಿಯಾಗಿ ಬಂದಿದ್ದರೆ, ರಾಜ್ಯದಲ್ಲಿ ಆದಾಯದ ಕೊರತೆ ಉಂಟಾಗುತ್ತಿರಲಿಲ್ಲ. ಕೇಂದ್ರದ ವಿಳಂಬ ಧೋರಣೆಯಿಂದಾಗಿ ರಾಜ್ಯ ಸರ್ಕಾರವೇ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ ಎಂದರು.
ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. 2025–26ರಲ್ಲಿ ಕರ್ನಾಟಕದ ಜಿಎಸ್ ಡಿಪಿ (GSDP) ವೃದ್ಧಿ ದರವು ಶೇ. 8.1 ರಷ್ಟಿದ್ದು, ಇದು ದೇಶದ ಸರಾಸರಿ ಜಿಡಿಪಿ (ಶೇ. 7.4) ಗಿಂತ ಹೆಚ್ಚಾಗಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಈವರೆಗೆ 1,21,591 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಈ ವರ್ಷ 52,000 ಕೋಟಿ ರೂ. ಮೀಸಲಿಡಲಾಗಿದೆ. ಜನರ ಕಲ್ಯಾಣಕ್ಕಾಗಿ ಈ ಹಣ ಬಳಕೆಯಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ, ತುಂಗಭದ್ರಾ ಅಣೆಕಟ್ಟಿನ ಗೇಟ್ ಗಳ ಬದಲಾವಣೆ, ಭದ್ರಾ ಮೇಲ್ದಂಡೆ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ಮತ್ತು 56 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ ಮಾಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು. 18ನೇ ಬಜೆಟ್ ಮಂಡನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು” ಎಂದು ಮಾರ್ಮಿಕವಾಗಿ ನುಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


