ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ಜಿಲ್ಲಾ ಮಾದಾರ ಮಹಾಸಭಾ ನೇತೃತ್ವದಲ್ಲಿ ಮಾದಿಗ ಸಮುದಾಯದ ಪ್ರಮುಖರು ಶುಕ್ರವಾರ ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರವು ಒಂದು ಕಡೆ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಿ, ಇನ್ನೊಂದೆಡೆ ತಾಂತ್ರಿಕ ಕಾರಣಗಳನ್ನು ನೀಡಿ ಅದನ್ನು ಜಾರಿಗೊಳಿಸದೆ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಇತ್ತೀಚೆಗೆ ವಿವಿಧ ಇಲಾಖೆಗಳಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಈ ಹಂತದಲ್ಲಿ ಒಳಮೀಸಲಾತಿ ಅನ್ವಯಿಸದಿದ್ದರೆ ವಿದ್ಯಾವಂತ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಅವರು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ತಂದಿದ್ದು, ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗದಿರುವುದು ಸಮುದಾಯದ 35 ವರ್ಷಗಳ ಸುದೀರ್ಘ ಹೋರಾಟವನ್ನು ಅಣಕಿಸಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು, ಒಳಮೀಸಲಾತಿ ಜಾರಿಯಲ್ಲಿ ಎದುರಾಗುವ ರೋಸ್ಟರ್ ಬಿಂದು ಸಮಸ್ಯೆಗಳ ಪರಿಹಾರಕ್ಕಾಗಿ ‘ಶಾಶ್ವತ ಆಯೋಗ’ ರಚಿಸಬೇಕು, ನ್ಯಾಯಾಲಯದಲ್ಲಿ ಒಳಮೀಸಲಾತಿ ಪರವಾಗಿ ಸರ್ಕಾರ ಸಮರ್ಥವಾದ ವಾದ ಮಂಡಿಸಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳದ ಶಿಫಾರಸನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ (Schedule 9) ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಈ ಪ್ರತಿಭಟನೆಯಲ್ಲಿ ಕೆ.ದೊರೈರಾಜ್, ವೈ.ಎಚ್.ಹುಚ್ಚಯ್ಯ, ವೈ.ಕೆ.ಬಾಲಕೃಷ್ಣಪ್ಪ ಸೇರಿದಂತೆ ಸಮುದಾಯದ ನೂರಾರು ಮುಖಂಡರು ಭಾಗವಹಿಸಿದ್ದರು. ತುರ್ತಾಗಿ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


