ತುಮಕೂರು: ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನಗರದ ಹೊರವಲಯದ ಯಲ್ಲಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕೋಲಾರ ಜಿಲ್ಲೆ ಬಾಗೇಪಲ್ಲಿಯ ದೇವಮ್ಮ (ಅಲಿಯಾಸ್ ದೇವಿ) ಮತ್ತು ಕೊರಟಗೆರೆಯ ಚಿನ್ನರಾಮಾಂಜಿ (ಅಲಿಯಾಸ್ ರಾಮಾಂಜಿ) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇವರಿಂದ ಸುಮಾರು 913 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ 2021ರ ಮಾರ್ಚ್ 23ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯವು ದೇವಮ್ಮನಿಗೆ 3 ವರ್ಷ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ಚಿನ್ನರಾಮಾಂಜಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಕ್ರಾಸ್ – ಚಿಕ್ಕರಾಂಪುರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓಬಳಯ್ಯ ಎಂಬಾತನಿಗೆ ನ್ಯಾಯಾಲಯವು 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ಈ ಪ್ರಕರಣವು 2020ರ ಫೆಬ್ರವರಿ 24ರಂದು ದಾಖಲಾಗಿತ್ತು.
ಸೈಬರ್ ಠಾಣೆಯ ತನಿಖಾಧಿಕಾರಿ ಶಮೀನ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಕೀಲರಾದ ಆರ್.ಟಿ. ಅರುಣ್ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಈ ಶಿಕ್ಷೆ ಪ್ರಕಟಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


