ಚಿಕ್ಕನಾಯಕನಹಳ್ಳಿ: ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಏಳಿಗೆಗಾಗಿ ಶ್ರಮಿಸಿ, ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದೇ ಒಬ್ಬ ಮಹಿಳೆಯ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ತಹಶೀಲ್ದಾರ್ ಮಮತಾ ಎಂ. ಹೇಳಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ವಿಶ್ವ ಮಹಿಳಾ ದಿನಾಚರಣೆ’ ಹಾಗೂ ‘ಮಹಿಳಾ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಗೆ ಕೇವಲ ವರ್ಷದ ಒಂದು ದಿನವಷ್ಟೇ ಗೌರವ ಸೀಮಿತವಾಗಬಾರದು. ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುವಂತೆ ಪ್ರತಿಯೊಬ್ಬ ಮಹಿಳೆಯೂ ಸಾಧನೆ ಮಾಡಬೇಕು. ಮೊದಲು ಒಬ್ಬ ಹೆಣ್ಣು ಮತ್ತೊಬ್ಬ ಹೆಣ್ಣಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗಳು ನಿಲ್ಲಬೇಕು. ನಮ್ಮೊಳಗೆ ನಾವು ಮೊದಲು ಸಮಾನತೆ ಕಂಡುಕೊಂಡಾಗ ಮಾತ್ರ ಸಮಾಜದಿಂದ ಸಮಾನತೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಮಾರ್ಮಿಕವಾಗಿ ನುಡಿದರು.
ಪ್ರತಿಯೊಬ್ಬ ಮಹಿಳೆಯಲ್ಲೂ ಅಪಾರ ಶಕ್ತಿಯಿದೆ. ಕಷ್ಟದ ಸಂದರ್ಭಗಳಲ್ಲಿ ಮತ್ತು ಅವಕಾಶಗಳು ದೊರೆತಾಗ ಆ ಶಕ್ತಿ ಅನಾವರಣಗೊಳ್ಳುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಹೆಣ್ಣು ಕಲಿತರೆ ಒಂದು ಕುಟುಂಬ ಮಾತ್ರವಲ್ಲ, ಇಡೀ ಸಮಾಜವೇ ಕಲಿತಂತೆ. ಈ ಸಂಭ್ರಮಾಚರಣೆ ಕೇವಲ ವೇದಿಕೆಗೆ ಸೀಮಿತವಾಗದೆ, ಪ್ರಾಯೋಗಿಕವಾಗಿ ಪ್ರತಿದಿನವೂ ಮಹಿಳೆಯರಿಗೆ ಗೌರವ ಸಿಗುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಗವಿರಂಗಯ್ಯ, ಆರ್.ಪರಶಿವಮೂರ್ತಿ, ಸಿಡಿಪಿಒ ಹೊನ್ನಪ್ಪ, ದೇವರಾಜು, ಪ್ರಿಯಾಂಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


