ಕುಣಿಗಲ್: ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ಒಂಟಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ.
ನಾಗಮ್ಮ (70) ಕೊಲೆಯಾದ ದುರ್ದೈವಿ. ಇವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮಾರ್ಚ್ 9ರ ಸೋಮವಾರದಂದು ಈ ಕೃತ್ಯ ನಡೆದಿದ್ದು, ಮಂಗಳವಾರ ರಾತ್ರಿ ಅಕ್ಕಪಕ್ಕದ ನಿವಾಸಿಗಳು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ನಾಗಮ್ಮ ಅವರ ಮಗ ವರದರಾಜು ಅವರು ಮಾರ್ಚ್ 8ರಂದು ಮನೆಗೆ ಬಂದು ಸೋಲಾರ್ ಮತ್ತು ಪೈಪ್ ಲೈನ್ ಕೆಲಸ ಮುಗಿಸಿ ಅಂದೇ ಬೆಂಗಳೂರಿಗೆ ಮರಳಿದ್ದರು. ಇದನ್ನೇ ಹೊಂಚು ಹಾಕಿದ್ದ ಕಳ್ಳರು, ಸೋಮವಾರ ಮನೆಗೆ ನುಗ್ಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ನಂತರ ಅವರ ಮೈಮೇಲಿದ್ದ ಚಿನ್ನದ ಸರ, ಬಳೆ ಹಾಗೂ ಓಲೆಗಳನ್ನು ಕಿತ್ತುಕೊಂಡು, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.
ನಾಗಮ್ಮ ಅವರು ಎರಡು ದಿನಗಳಿಂದ ಮನೆಯಿಂದ ಹೊರಗೆ ಬಾರದಿದ್ದನ್ನು ಗಮನಿಸಿದ ನೆರೆಹೊರೆಯವರು ಸಂಶಯಗೊಂಡು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಅವರ ಮೃತದೇಹ ಕಂಡುಬಂದಿದೆ. ಕೂಡಲೇ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


