ತುಮಕೂರು: ಕೊಟ್ಟಿದ್ದ ಸಾಲದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಮೆಳೆಕೋಟೆ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ನಜರಾಬಾದ್ ನಿವಾಸಿ ಮೊಹಮ್ಮದ್ ಮುಬಾರಕ್ (28) ಕೊಲೆಯಾದ ದುರ್ದೈವಿ. ಮರಳೂರು ದಿಣ್ಣೆಯ ನಿವಾಸಿ ಮುಬಾರಕ್ (29) ಬಂಧಿತ ಆರೋಪಿ. ಇಬ್ಬರೂ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು.
ಆರೋಪಿ ಮುಬಾರಕ್, ಮೃತ ಮೊಹಮ್ಮದ್ ಮುಬಾರಕ್‌ನಿಂದ ₹50 ಸಾವಿರ ಸಾಲ ಪಡೆದಿದ್ದ ಎನ್ನಲಾಗಿದೆ. ಈ ಹಣವನ್ನು ಹಿಂದಿರುಗಿಸುವಂತೆ ಮೊಹಮ್ಮದ್ ಪದೇ ಪದೇ ಕೇಳುತ್ತಿದ್ದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಮಂಗಳವಾರ ಸಂಜೆ ಸಹ ಹಣದ ವಿಚಾರವಾಗಿ ಇಬ್ಬರ ನಡುವೆ ಮೆಳೆಕೋಟೆ ಬಳಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಮುಬಾರಕ್, ತನ್ನಲ್ಲಿದ್ದ ಚಾಕುವಿನಿಂದ ಮೊಹಮ್ಮದ್ ಮುಬಾರಕ್‌ನ ಕುತ್ತಿಗೆ ಮತ್ತು ಕೆನ್ನೆಗೆ ಇರಿದು ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ತಿಲಕ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಆರ್. ಚಂದ್ರಶೇಖರ್ ಹಾಗೂ ಸಿಪಿಐ ಎಫ್.ಕೆ. ನದಾಫ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


