ಪಾವಗಡ: ತಾಲೂಕಿನ ತುಮಕೂರು ರಸ್ತೆಯಲ್ಲಿರುವ ಖಾಸಗಿ ಎಲ್ ಪಿಜಿ ಏಜೆನ್ಸಿಯ ಮುಂದೆ ಗುರುವಾರ ಗೃಹಬಳಕೆಯ ಸಿಲಿಂಡರ್ ಗಳಿಗಾಗಿ ಜನರು ಸಾಲುಗಟ್ಟಿ ನಿಂತ ಪ್ರಸಂಗ ನಡೆಯಿತು. ಮುಂದಿನ ದಿನಗಳಲ್ಲಿ ಸಿಲಿಂಡರ್ ಅಭಾವ ಉಂಟಾಗಬಹುದು ಎಂಬ ಆತಂಕದಲ್ಲಿ ನೂರಾರು ಗ್ರಾಹಕರು ಬೆಳ್ಳಂಬೆಳಗ್ಗೆಯೇ ವಿತರಣಾ ಕೇಂದ್ರದ ಮುಂದೆ ಜಮಾಯಿಸಿದ್ದರು.
ಕಳೆದ ನಾಲ್ಕು ದಿನಗಳಿಂದ ಗ್ಯಾಸ್ ಬುಕ್ ಮಾಡಿ ಒಟಿಪಿ (OTP) ಬಂದಿದ್ದರೂ ಸಹ, ಸರ್ವರ್ ಸಮಸ್ಯೆಯ ನೆಪವೊಡ್ಡಿ ಸಿಬ್ಬಂದಿ ಸಿಲಿಂಡರ್ ವಿತರಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಹೋಟೆಲ್ ಉದ್ದೇಶಕ್ಕೆ ಹಾಗೂ ಮನೆ ಬಳಕೆಗಾಗಿ ಸಿಲಿಂಡರ್ ಪಡೆಯಲು ಜನ ಸಾಮಾನ್ಯರು ಪರದಾಡುವಂತಾಗಿದೆ. ಬೆಲೆ ಏರಿಕೆಯ ಭೀತಿ ಮತ್ತು ಸಿಲಿಂಡರ್ ಸಿಗದೇ ಇರಬಹುದು ಎಂಬ ಆತಂಕದಿಂದ ಅನೇಕರು ಅಗತ್ಯಕ್ಕಿಂತ ಹೆಚ್ಚಿನ ದಾಸ್ತಾನು ಮಾಡಿಕೊಳ್ಳಲು ಮುಂದಾಗುತ್ತಿರುವುದು ಬೇಡಿಕೆ ಹೆಚ್ಚಲು ಕಾರಣ ಎನ್ನಲಾಗಿದೆ.
ಏಜೆನ್ಸಿ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿದ ವಿತರಣಾ ಕೇಂದ್ರದ ಪ್ರತಿನಿಧಿ ಕಾರ್ತಿಕ್ ಅವರು, “ನಮ್ಮಲ್ಲಿ ಸಿಲಿಂಡರ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸರ್ವರ್ ಸಮಸ್ಯೆಯಾಗುತ್ತಿದ್ದು, ಗ್ರಾಹಕರಿಗೆ ವಿತರಿಸಲು ತೊಂದರೆಯಾಗುತ್ತಿದೆ. ಸರ್ವರ್ ಸರಿಹೋದ ಕೂಡಲೇ ಜೇಷ್ಠತೆಯ ಆಧಾರದ ಮೇಲೆ ಎಲ್ಲರಿಗೂ ಸಿಲಿಂಡರ್ ನೀಡಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಈ ಹಿಂದೆ ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದ ದಾಸ್ತಾನು ಬರುತ್ತಿತ್ತು. ಆದರೆ ಈಗ ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪದಿಂದ ಸರಬರಾಜು ಮಾಡುವ ಕುರಿತು ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ವರ್ ಸಮಸ್ಯೆ ನಡುವೆಯೂ ಸಂಜೆ 6 ಗಂಟೆಯವರೆಗೆ ಚೀಟಿ ಬರೆದುಕೊಡುವ ಮೂಲಕ ಸಿಲಿಂಡರ್ ವಿತರಿಸುವ ಪ್ರಯತ್ನ ಮಾಡಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


