ಬೆಂಗಳೂರು: ರಾಜ್ಯದಲ್ಲಿ ತೀವ್ರವಾಗಿ ಕಾಡುತ್ತಿರುವ ಸ್ಮಶಾನ ಭೂಮಿಯ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಮಶಾನಕ್ಕಾಗಿ ಖಾಸಗಿ ಜಮೀನುಗಳನ್ನು ಖರೀದಿಸಲು ಮಾರುಕಟ್ಟೆ ದರಕ್ಕಿಂತ (Guidance Value) ಮೂರು ಪಟ್ಟು ಹೆಚ್ಚು ಹಣವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯದ ಹಲವು ಹಳ್ಳಿಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೆ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ಗಮನಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ಸರ್ಕಾರಿ ದರದಲ್ಲಿ ಜಮೀನು ನೀಡಲು ಮಾಲೀಕರು ಹಿಂದೇಟು ಹಾಕುವುದರಿಂದ, ಈಗ ಮಾರುಕಟ್ಟೆ ಮೌಲ್ಯಕ್ಕಿಂತ ೩ ಪಟ್ಟು ಅಧಿಕ ಹಣ ನೀಡಲು ನಿರ್ಧರಿಸಲಾಗಿದೆ.
ಸ್ಮಶಾನ ಭೂಮಿ ಇಲ್ಲದ ಗ್ರಾಮಗಳನ್ನು ಗುರುತಿಸಿ, ಅಲ್ಲಿ ಖಾಸಗಿ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ ಭೂಮಿ ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಉದ್ದೇಶಕ್ಕಾಗಿ ಅಗತ್ಯವಿರುವ ಅನುದಾನವನ್ನು ಒದಗಿಸಲು ಕಂದಾಯ ಇಲಾಖೆ ಸಿದ್ಧವಿದ್ದು, ಭೂಮಿ ಲಭ್ಯವಿದ್ದಲ್ಲಿ ತಕ್ಷಣವೇ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಸಾರ್ವಜನಿಕ ಸಮಸ್ಯೆ ನಿವಾರಣೆ: ಹಲವು ವರ್ಷಗಳಿಂದ ಸ್ಮಶಾನ ಭೂಮಿ ಹಂಚಿಕೆಯಾಗದೆ ಶವಸಂಸ್ಕಾರಕ್ಕೆ ಪರದಾಡುತ್ತಿದ್ದ ಜನರಿಗೆ ಸರ್ಕಾರದ ಈ ನಿರ್ಧಾರದಿಂದ ದೊಡ್ಡ ಮಟ್ಟದ ನೆರವಾಗಲಿದೆ.
ರಾಜ್ಯದ ಪ್ರತಿಯೊಂದು ಹಳ್ಳಿಗೂ ತನ್ನದೇ ಆದ ಸ್ಮಶಾನ ಇರಬೇಕು ಎಂಬ ಉದ್ದೇಶದಿಂದ ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಭೂಮಿ ನೀಡುವ ರೈತರಿಗೆ ಅಥವಾ ಮಾಲೀಕರಿಗೆ ನಷ್ಟವಾಗದಂತೆ ಆಕರ್ಷಕ ಬೆಲೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


