ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕೆಡಿ-ದಿ ಡೆವಿಲ್’ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” (ಹಿಂದಿಯಲ್ಲಿ ‘ಸರ್ಕೆ ಚುನಾರ್ ತೇರಿ’) ಹಾಡು ಭಾರೀ ವಿವಾದಕ್ಕೆ ಗುರಿಯಾಗಿರುವ ಬೆನ್ನಲ್ಲೇ, ಬಾಲಿವುಡ್‌ನ ಪ್ರಸಿದ್ಧ ಗೀತರಚನೆಕಾರ ರಕೀಬ್ ಆಲಂ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ.
ಈ ಹಾಡಿನ ಸಾಹಿತ್ಯವು ಮಹಿಳೆಯರಿಗೆ ಅವಮಾನಕಾರಿ ಹಾಗೂ ಅಶ್ಲೀಲತೆಯಿಂದ ಕೂಡಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಹಾಡಿನ ಹಿಂದಿ ಆವೃತ್ತಿಯನ್ನು ಈಗಾಗಲೇ ಅಧಿಕೃತ ಪ್ಲಾಟ್ ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಕೀಬ್ ಆಲಂ ಅವರು, “ನಾನು ಈ ಹಾಡಿನ ಸಾಹಿತ್ಯವನ್ನು ಸ್ವತಂತ್ರವಾಗಿ ಬರೆದಿಲ್ಲ. ನಿರ್ದೇಶಕ ಪ್ರೇಮ್ ಅವರು ಕನ್ನಡದಲ್ಲಿ ಬರೆದಿದ್ದ ಮೂಲ ಸಾಹಿತ್ಯವನ್ನೇ ಹಿಂದಿಗೆ ಅನುವಾದ ಮಾಡುವಂತೆ ನನಗೆ ಕೇಳಲಾಗಿತ್ತು. ನಾನು ಕೇವಲ ಅನುವಾದಕನಾಗಿ ಕೆಲಸ ಮಾಡಿದ್ದೇನೆ ಹೊರತು, ಆ ಸಾಹಿತ್ಯ ನನ್ನದಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂತಹ ದ್ವಂದ್ವಾರ್ಥದ ಸಾಹಿತ್ಯವು ಸೆನ್ಸಾರ್ ಮಂಡಳಿಯಲ್ಲಿ ಸಮಸ್ಯೆ ತಂದೊಡ್ಡಬಹುದು ಎಂದು ಭಾವಿಸಿ, ತಾವು ಆರಂಭದಲ್ಲಿ ಈ ಹಾಡಿಗೆ ಕೆಲಸ ಮಾಡಲು ನಿರಾಕರಿಸಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ, ಚಿತ್ರತಂಡವು ಮೂಲ ಕನ್ನಡದ ಭಾವನೆಗೆ ಧಕ್ಕೆಯಾಗದಂತೆ ಅನುವಾದಿಸಲು ಒತ್ತಾಯಿಸಿದ್ದರಿಂದ ಒಪ್ಪಿಕೊಂಡಿದ್ದಾಗಿ ಅವರು ಹೇಳಿದ್ದಾರೆ.
“ನಾನು ‘ಪುಷ್ಪ’ ಚಿತ್ರದ ಎಲ್ಲಾ ಹಿಂದಿ ಹಾಡುಗಳನ್ನು ಹಾಗೂ ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಚಿತ್ರದ ಹಾಡುಗಳನ್ನು ಬರೆದಿದ್ದೇನೆ. ಆದರೆ, ಈ ಒಂದು ಹಾಡಿನ ವಿವಾದದಿಂದಾಗಿ ನನಗೆ ತುಂಬಾ ಅವಮಾನವಾಗುತ್ತಿದೆ. ಇಂತಹ ಹಾಡಿನ ಜೊತೆ ನನ್ನ ಹೆಸರನ್ನು ಜೋಡಿಸುತ್ತಿರುವುದು ವಿಷಾದನೀಯ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಾಡು ಅಂತಿಮವಾಗಿ ಮದ್ಯದ ಬಾಟಲಿಯ ಬಗ್ಗೆ ಎಂಬುದು ತಿಳಿದಿದ್ದರೂ, ಅದಕ್ಕೂ ಮೊದಲು ಬರುವ ಸಾಲುಗಳು ಅಸಹಜ ಮತ್ತು ಅನುಚಿತವಾಗಿ ಕಾಣಿಸುತ್ತವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ‘ಕೆಡಿ’ ಚಿತ್ರದ ಹಾಡಿನ ವಿವಾದ ಈಗ ಚಿತ್ರತಂಡ ಮತ್ತು ಗೀತರಚನೆಕಾರರ ನಡುವಿನ ಸಮರ್ಥನೆಯ ಹಂತಕ್ಕೆ ಬಂದು ತಲುಪಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


