ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ದಿನಕ್ಕೆ ಬೇಕಿರುವ 44,000 ಸಿಲಿಂಡರ್ ಗಳ ಪೈಕಿ ಕೇವಲ 9,000 ಸಿಲಿಂಡರ್‌ಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಸಿಲಿಂಡರ್ ಲಭ್ಯತೆ ಕುರಿತು ಮಾಹಿತಿ ನೀಡಿದ ಸಚಿವರು, ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ದಿನಕ್ಕೆ ಅಗತ್ಯವಿರುವ 3,52,921 ಗೃಹ ಬಳಕೆಯ ಸಿಲಿಂಡರ್‌ಗಳನ್ನು ತೈಲ ಕಂಪನಿಗಳು ಸಮರ್ಪಕವಾಗಿ ಪೂರೈಸುತ್ತಿವೆ. ಆದರೆ, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಮಾತ್ರ ಶೇ. 20ರಷ್ಟು ಮಾತ್ರ ಲಭ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.
ಸಂಕಷ್ಟದಲ್ಲಿ ಹೋಟೆಲ್ ಉದ್ಯಮ:
ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಹೋಟೆಲ್ ಮಾಲೀಕರಿಗೆ ತಾತ್ಕಾಲಿಕವಾಗಿ ವಿದ್ಯುತ್ ಸ್ಟೌವ್ ಅಥವಾ ಇತರ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇರಾನ್‌ನಿಂದ ಬರಬೇಕಿರುವ 16 ಎಲ್‌ಪಿಜಿ ಟ್ಯಾಂಕರ್ ಹಡಗುಗಳು ಭಾರತ ತಲುಪಿದ ನಂತರ ಪರಿಸ್ಥಿತಿ ತಿಳಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಆದ್ಯತೆಯ ಮೇರೆಗೆ ವಿತರಣೆ:
- ಪ್ರಸ್ತುತ ಲಭ್ಯವಿರುವ 9,000 ಸಿಲಿಂಡರ್‌ಗಳನ್ನು ಆದ್ಯತೆಯ ಮೇರೆಗೆ ಈ ಕೆಳಗಿನಂತೆ ವಿತರಿಸಲಾಗುತ್ತಿದೆ:
- ಆಸ್ಪತ್ರೆ, ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳು: 4,200 ಸಿಲಿಂಡರ್.
- ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಇಂದಿರಾ ಕ್ಯಾಂಟೀನ್, ನಂದಿನಿ ಮಳಿಗೆ: 1,200 ಸಿಲಿಂಡರ್.
- ಆಹಾರ ಸಂಸ್ಕರಣೆ ಮತ್ತು ಕೃಷಿ ಸಂಬಂಧಿತ ಕೈಗಾರಿಕೆಗಳು: 500 ಸಿಲಿಂಡರ್.
- ಹೋಟೆಲ್ ಗಳಿಗೆ: ಕೇವಲ 1,000 ಸಿಲಿಂಡರ್ ಗಳು ಮಾತ್ರ ಸಿಗುತ್ತಿದ್ದು, ಇದನ್ನು ಹೋಟೆಲ್ ಸಂಘಟನೆಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರ ಭವನಕ್ಕೂ ಶೇ. 50ರಷ್ಟು ಸಿಲಿಂಡರ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


