ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ 2026–27ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಸ್ವಾರಸ್ಯಕರ ಬೆಳವಣಿಗೆ ನಡೆಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್, ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ‘ಟ್ರೋಟಿಂಗ್ ಎಕನಾಮಿ’, ‘ಫಲಧಾರೆ’, ‘ಭಿಷತತ್ವ’ದಂತಹ ಕಠಿಣ ಹಾಗೂ ಹೊಸ ಪದಗಳನ್ನು ಬಳಸಿದ್ದಾರೆ. ಇವುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಶಬ್ದಕೋಶದ (Dictionary) ಅಗತ್ಯವಿದೆ ಎಂದು ವ್ಯಂಗ್ಯವಾಡಿದರು.
ಮುಂದುವರಿದು ಮಾತನಾಡಿದ ಸುನೀಲ್ ಕುಮಾರ್, “ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುವುದಾದರೆ ನಮಗೆ ಒಂದು ಶಬ್ದಕೋಶವನ್ನೂ ನೀಡಿ” ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈ ಹೊಸ ಪದಗಳಿಗೆ ಸಚಿವ ಜಮೀರ್ ಅವರ ಕೈಯಲ್ಲೇ ಅರ್ಥ ಹೇಳಿಸಿ ಎಂದು ಹಾಸ್ಯ ಮಾಡಿದರು.
ತಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಎಚ್ಚೆತ್ತ ಜಮೀರ್ ಅಹ್ಮದ್, “ಮುಂದಿನ ಬಜೆಟ್ ಮಾತ್ರವಲ್ಲ, ಇನ್ನು ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ” ಎಂದು ಖಡಾಖಡಿಯಾಗಿ ಉತ್ತರಿಸಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ ಜಮೀರ್ ತೆರೆ ಎಳೆಯುವ ಪ್ರಯತ್ನ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


