ಪಾವಗಡ: ಸರ್ಕಾರಿ ಯೋಜನೆಗಳ ಜೊತೆಗೆ ಅಧಿಕಾರಿಗಳ ಕಾರ್ಯಕ್ಷಮತೆ ಪರಿಶೀಲಿಸುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಅವರು ಗುರುವಾರ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಾಗೂ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಅಹವಾಲು ಸ್ವೀಕರಿಸಿ ಮಾತನಾಡಿದರು.
ವೈ.ಎನ್.ಹೊಸಕೋಟೆ ಗ್ರಾಮದಲ್ಲಿ 163, ಪಟ್ಟಣದಲ್ಲಿ 232 ಅರ್ಜಿಗಳು ಸೇರಿ ಒಟ್ಟು 395 ಅರ್ಜಿಗಳು ಸ್ವೀಕರಿಸಲಾಗಿದೆ. ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ವಸತಿ, ನಿವೇಶನ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ರೈತರ ಜಮೀನುಗಳಿಗೆ ದಾರಿ ಸೇರಿದಂತೆ ಪಿಂಚಣಿ ಸಮಸ್ಯೆಗಳು, ಆಧಾರ್, ಆಹಾರ, ಪಿಂಚಣಿ ಮತ್ತು ಪೌತಿ ಖಾತೆ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ನಾನಾ ರೀತಿಯ ಸಮಸ್ಯೆಗಳ ಜೊತೆಯಲ್ಲಿ ಗ್ರಾಹಕರ ಸಮಸ್ಯೆಗಳ ಬಗ್ಗೆ ಕೂಡ ಅರ್ಜಿ ಸಲ್ಲಿಕೆಯಾಗಿವೆ ಎಂದರು.
ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದು, ಪ್ರತಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆಯಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ತಕ್ಷಣ ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮನವಿ ಸಲ್ಲಿಸಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದರು.
ಪಾವಗಡ ಪಟ್ಟಣದಲ್ಲಿ ನಡೆದ ಜನ ಸಂಪರ್ಕ ಸಭೆಗೆ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಬಂದಿದ್ದರು. ಸೂಕ್ತ ಸ್ಥಳದಲ್ಲಿ ಸಭೆ ನಡೆಯದ ಪರಿಣಾಮ ಸಾಕಷ್ಟು ಜನ ಸಾಲಿನಲ್ಲಿ ನಿಲ್ಲಲಾಗದೆ ವೃದ್ಧರು ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿ ಅರ್ಜಿ ನೀಡದೆ ಹಿಂತಿರುಗಿದರು.
ಪಟ್ಟಣದ ಸುತ್ತಮುತ್ತ ಬೆಟ್ಟಗಳಲ್ಲಿ ಮಣ್ಣು ತೆಗೆಯುವವರ ಮೇಲೆ ತಕ್ಷಣ ಕ್ರಮವಹಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಮಧುಗಿರಿ ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ವೈ.ರವಿ, ಇಒ ಮಧುಸೂದನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಜಾತಿ ತಾರತಮ್ಯ: ಇನ್ನೂ ವೈ.ಎನ್.ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ವೈದ್ಯೋಪಚಾರ ಮಾಡುವ ವೈದ್ಯರು ಕೀಳು ಮನಸ್ಥಿತಿಯಿಂದ ರೋಗಿಗಳನ್ನು ಕಾಣುತ್ತಾರೆ. ಹತ್ತಿರ ನಿಲ್ಲುವಂತಿಲ್ಲ, ದೂರ ನಿಂತು ರೋಗಿಗಳು ಆರೋಗ್ಯ ಸಮಸ್ಯೆ ಬಗ್ಗೆ ಹೇಳಬೇಕು. ಇಲ್ಲಿ ಜಾತಿ ತಾರತಮ್ಯದಿಂದ ನೋಡುವ ಪ್ರವೃತ್ತಿ ಇದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ವೇದನೆ ವ್ಯಕ್ತಪಡಿಸಿದರು.
ಮೃತ ಮಲ್ಲಿಕಾರ್ಜುನಯ್ಯನ ತಾಯಿ ಕಣ್ಣೀರು:
ಮೃದು ಸ್ವಭಾವದ, ಯಾರಿಗೂ ಕೇಡು ಬಯಸದ ನನ್ನ ಮಗ ಮಲ್ಲಿಕಾರ್ಜುನಯ್ಯ ಜೆಡಿ ಕೃಷ್ಣಪ್ಪನ ಕಿರುಕುಳದಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಕೃಷ್ಣಪ್ಪ, ಕೆ.ಆರ್. ಮಂಜುನಾಥ ಮತ್ತು ಸೋಮಶೇಖರ್ ಮೂವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಎಂದು ಜಿಲ್ಲಾಧಿಕಾರಿಗಳ ಕೈಹಿಡಿದು ಅತ್ತ ಘಟನೆ ನಡೆಯಿತು.
“ಏಪ್ರಿಲ್ 4ರಂದು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆ ನಡೆಯಲಿದೆ. 9 ತಾಲೂಕುಗಳಿಂದ ಬಂದಿರುವ ಅರ್ಜಿಗಳ ಸಮಸ್ಯೆಗಳಿಗೆ ಅಂದು ತಹಶೀಲ್ದಾರ್ ಮತ್ತು ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಗಮನಹರಿಸಿ ಪರಿಹಾರ ನೀಡುವ ಕೆಲಸ ಆಗಲಿದೆ.”
— ಶುಭ ಕಲ್ಯಾಣ್, ಜಿಲ್ಲಾಧಿಕಾರಿಗಳು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


