ಬೆಂಗಳೂರು: ಉದ್ಯೋಗ ಅರಸಿ ಸಿಲಿಕಾನ್ ಸಿಟಿಗೆ ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿದ್ದ ಥಾಯ್ಲೆಂಡ್ ಮೂಲದ ಸಂತ್ರಸ್ತ ಮಹಿಳೆಯನ್ನು ಕೂಡಲೇ ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ಥಾಯ್ಲೆಂಡ್ ಮೂಲದ ಜಿರಾಟ್ಜಾಯಾ ಎಂಬ ಮಹಿಳೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆದರೆ, ಇಲ್ಲಿನ ಕೆಲವರು ಆಕೆಯನ್ನು ಪುಸಲಾಯಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದರು. 2026ರ ಫೆಬ್ರವರಿ 3ರಂದು ರಾಮಮೂರ್ತಿನಗರದ ‘ಟ್ರಿನಿಟಿ ಥಾಯ್ ಸ್ಪಾ ವೆಲ್‌ನೆಸ್ ಸೆಂಟರ್’ ಮೇಲೆ ದಾಳಿ ನಡೆಸಿದ್ದ ಪೊಲೀಸರು ಆಕೆಯನ್ನು ರಕ್ಷಿಸಿದ್ದರು.
ರಕ್ಷಣೆಗೊಳಗಾದ ಮಹಿಳೆಯನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ವಶಕ್ಕೆ ನೀಡಲಾಗಿತ್ತು. ಆಕೆಯ ವೀಸಾ ಅವಧಿ ಮುಗಿದಿದ್ದರಿಂದ ತುಮಕೂರಿನ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ತನ್ನನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಅರ್ಜಿದಾರರು ವೇಶ್ಯಾವಾಟಿಕೆ ದಂಧೆಯ ಸಂತ್ರಸ್ತೆಯಾಗಿದ್ದಾರೆ. ಆಕೆ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಬಾಕಿ ಇಲ್ಲದಿದ್ದರೆ, ತಕ್ಷಣವೇ ಆಕೆಯನ್ನು ಥಾಯ್ಲೆಂಡ್‌ಗೆ ಕಳುಹಿಸಿಕೊಡಲು FRRO ಕ್ರಮ ಕೈಗೊಳ್ಳಬೇಕು” ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಉದ್ಯೋಗಕ್ಕಾಗಿ ಬಂದಿದ್ದ ಮಹಿಳೆಯನ್ನು ಕೆಲವರು ದಂಧೆಗೆ ಬಳಸಿಕೊಂಡಿದ್ದಾರೆ. ಇದರಿಂದ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ವೀಸಾ ಅವಧಿ ಮುಗಿದಿರುವುದರಿಂದ ಆಕೆಯನ್ನು ಬಂಧನದಲ್ಲಿ ಇರಿಸುವುದು ಸರಿಯಲ್ಲ, ಮಾನವೀಯ ನೆಲೆಯಲ್ಲಿ ಸ್ವದೇಶಕ್ಕೆ ಕಳುಹಿಸಬೇಕು” ಎಂದು ಮನವಿ ಮಾಡಿದ್ದರು.
ಈ ಆದೇಶದ ಬೆನ್ನಲ್ಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಮಹಿಳೆಯನ್ನು ಥಾಯ್ಲೆಂಡ್‌ಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


