ದಾವಣಗೆರೆ: ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಜಿಎಸ್‌ಟಿ ಸಂಗ್ರಹ ಮತ್ತು ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ‘ಆರ್ಥಿಕ ಸಂಕಷ್ಟ’ದ ಆರೋಪಗಳನ್ನು ತಳ್ಳಿಹಾಕಿದರು.
ದೇಶದ ಜಿಡಿಪಿ ದರ ಶೇ 7.14 ರಷ್ಟಿದ್ದರೆ, ಕರ್ನಾಟಕದ ಜಿಡಿಪಿ ದರ ಶೇ 8.1 ರಷ್ಟಿದೆ. ದೇಶದ ಆರ್ಥಿಕ ಸ್ಥಿತಿಗಿಂತ ರಾಜ್ಯದ ಸ್ಥಿತಿ ಉತ್ತಮವಾಗಿದೆ ಎಂದು ಸಿಎಂ ಅಂಕಿಅಂಶಗಳ ಸಹಿತ ವಿವರಿಸಿದರು.
ಬಿಜೆಪಿ ನಾಯಕ ಆರ್. ಅಶೋಕ ಅವರ ‘ಸಾಲದ ರಾಮಯ್ಯ’ ಎಂಬ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ, “ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಸಾಲ ₹53 ಲಕ್ಷ ಕೋಟಿ ಇತ್ತು, ಈಗ ಅದು ₹218 ಲಕ್ಷ ಕೋಟಿಗೆ ಏರಿಕೆಯಾಗಿದೆ. 12 ವರ್ಷಗಳಲ್ಲಿ ಮೋದಿ ಅವರು ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಹಾಗಾದರೆ ಅವರನ್ನು ಏನೆಂದು ಕರೆಯಬೇಕು?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ತಳಸಮುದಾಯದ ಪರವಾದ ಆರ್ಥಿಕ ಸಿದ್ಧಾಂತವನ್ನು ಹೊಂದಿದೆ. ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಬಿಜೆಪಿ ಬಡವರ ಪರವಾದ ಯೋಜನೆಗಳನ್ನು ಯಾವಾಗಲೂ ವಿರೋಧಿಸುತ್ತಾ ಬಂದಿದೆ ಎಂದು ಅವರು ಕಿಡಿಕಾರಿದರು.
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭಾರಿ ಮತಗಳ ಅಂತರದಿಂದ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಏಪ್ರಿಲ್ 5 ರಿಂದ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಚಾರಕ್ಕೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಮತದಾರರ ಪಟ್ಟಿಯ ದುರುಪಯೋಗದಂತಹ ಆರೋಪಗಳು ಈ ಹಿಂದೆ ಯಾವ ಪ್ರಧಾನಿಯ ಕಾಲದಲ್ಲೂ ಕೇಳಿಬಂದಿರಲಿಲ್ಲ, ಆದರೆ ಮೋದಿ ಕಾಲದಲ್ಲಿ ಇಂತಹ ಆರೋಪಗಳು ಕೇಳಿಬರುತ್ತಿವೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


