ವಿಜಯಪುರ: ದಾವಣಗೆರೆ–ಬಾಗಲಕೋಟೆ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಚಿವ ಎಂ.ಬಿ.ಪಾಟೀಲ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಸಚಿವ ಎಂ.ಬಿ.ಪಾಟೀಲ್ ನೀಡಿದ್ದ ‘ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಿ’ ಎಂಬ ಸವಾಲಿಗೆ ವಿಜಯಪುರದಲ್ಲಿ ಇಂದು ತಿರುಗೇಟು ನೀಡಿದ ಯತ್ನಾಳ್, “ನಾನು ಯಾರ ಮುಂದೆಯೂ ಹೋಗಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಬೇಡುವುದಿಲ್ಲ. ಇಂದು ಹನುಮ ಜಯಂತಿಯ ಪವಿತ್ರ ದಿನ. ಈ ಆಂಜನೇಯನ ಸಾಕ್ಷಿಯಾಗಿ ಹೇಳುತ್ತೇನೆ, ಒಂದು ದಿನ ಇದೇ ಬಿಜೆಪಿ ನಾಯಕರು ಅಪ್ಪ-ಮಕ್ಕಳನ್ನು (ಯಡಿಯೂರಪ್ಪ ಕುಟುಂಬ) ಕೈಬಿಟ್ಟು ನನ್ನನ್ನು ಹುಡುಕಿಕೊಂಡು ಬರುತ್ತಾರೆ,” ಎಂದು ಭವಿಷ್ಯ ನುಡಿದರು.
ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲೇ ಕಠಿಣ ಆಡಳಿತ ನೀಡುತ್ತೇನೆ. ನನ್ನ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ, ಅವರ ಬದಲು ಅಲ್ಪಸಂಖ್ಯಾತರಾದ ಮರಾಠರು, ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುತ್ತೇನೆ ಎಂದರು.
ಎಂ.ಬಿ. ಪಾಟೀಲ್ ವಿರುದ್ಧ ವ್ಯಂಗ್ಯ:
ಸಚಿವ ಎಂ.ಬಿ. ಪಾಟೀಲ್ ಅವರ ಟೀಕೆಗಳಿಗೆ ಉತ್ತರಿಸಿದ ಅವರು, “ನನಗೆ ಸ್ವಾಭಿಮಾನದ ಪಾಠ ಮಾಡುವ ಮೊದಲು ಪಾಟೀಲರು ಬಾಗೇವಾಡಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರಿಸ್ಥಿತಿ ನೋಡಿಕೊಳ್ಳಲಿ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯೇ ರಾತ್ರಿ ಹೊತ್ತು ಮುಸುಕು ಹಾಕಿಕೊಂಡು ಬಂದು ಪಾಟೀಲ್ ವಿರುದ್ಧ ಪ್ರಚಾರ ಮಾಡುತ್ತಾನೆ. ಇಂತಹ ಸ್ಥಿತಿಯಲ್ಲಿರುವವರು ನನಗೆ ಬುದ್ಧಿ ಹೇಳುವುದು ಬೇಡ,” ಎಂದು ಲೇವಡಿ ಮಾಡಿದರು.
ಬಾಗಲಕೋಟೆಯಲ್ಲಿ ಪ್ರಚಾರ:
ವೀರಣ್ಣ ಚರಂತಿಮಠ ಅವರು ತಮ್ಮ ಆತ್ಮೀಯ ಸ್ನೇಹಿತರೆಂದು ತಿಳಿಸಿದ ಯತ್ನಾಳ್, ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರ ಆಹ್ವಾನದ ಮೇರೆಗೆ ತಾವು ಅಲ್ಲಿಗೆ ಪ್ರಚಾರಕ್ಕೆ ತೆರಳುತ್ತಿರುವುದಾಗಿ ಸ್ಪಷ್ಟಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


