ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ವೇಳೆ ಪ್ರೇಕ್ಷಕರ ಮೊಬೈಲ್ ಕದಿಯುತ್ತಿದ್ದ ದೊಡ್ಡ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ 9 ಮಂದಿ ಅಪ್ರಾಪ್ತರಿರುವುದು ಬೆಳಕಿಗೆ ಬಂದಿದೆ.
ಮಾರ್ಚ್ 28 ರಂದು ನಡೆದ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಜಾರ್ಖಂಡ್ ಮೂಲದ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 75 ಹೈಎಂಡ್ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಾರ್ಖಂಡ್‌ನಿಂದ ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್ ಕುಮಾರ್ ಮತ್ತು ಶುಭಮನ್ ಕುಮಾರ್ ಎಂಬುವವರು ಈ ಗ್ಯಾಂಗ್‌ನ ಸೂತ್ರಧಾರರು. ಇವರು 9 ಮಂದಿ ಅಪ್ರಾಪ್ತರನ್ನು ಬಳಸಿಕೊಂಡು ಜನದಟ್ಟಣೆಯಿರುವ ಕಡೆಗಳಲ್ಲಿ ಮೊಬೈಲ್ ಕಳ್ಳತನ ಮಾಡಿಸುತ್ತಿದ್ದರು. ಕೇವಲ ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲೂ ಈ ಗ್ಯಾಂಗ್ ಕೈಚಳಕ ತೋರಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಕಳೆದ ಪಂದ್ಯದ ಅನುಭವದ ಹಿನ್ನೆಲೆಯಲ್ಲಿ, ಪ್ರೇಕ್ಷಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರುವಂತೆ ಮತ್ತು ಸಂಚಾರಕ್ಕಾಗಿ ಮೆಟ್ರೋ ಬಳಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


