ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಅತಿ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಆತಂಕಕಾರಿ ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಜ್ಯೋತಿ ಅವರು ಬೀದರ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು ಮತ್ತು ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು. ಕಲಬುರಗಿಯಿಂದ ಬೀದರ್ ಗೆ ಮರಳುವ ಮಾರ್ಗಮಧ್ಯೆ ಕಮಲಾಪುರ ತಾಲೂಕಿನ ಕಲ್ಮೂಡ ಬಳಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮೊದಲು ಮಾರಕಾಸ್ತ್ರಗಳಿಂದ ಅವರನ್ನು ಕೊಚ್ಚಿ ಕೊಲೆ ಮಾಡಿದ ಹಂತಕರು, ನಂತರ ರಸ್ತೆ ಪಕ್ಕದಲ್ಲಿ ಸುಮಾರು 5 ಲೀಟರ್ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾರೆ.
ಆರಂಭದಲ್ಲಿ ಕಲ್ಮೂಡ ಗ್ರಾಮದ ಮನೋಹರ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ‘ಅಪರಿಚಿತ ಮಹಿಳೆಯ ಕೊಲೆ’ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ತನಿಖೆ ನಡೆಸಿದಾಗ ಮೃತದೇಹವು ಶಿಕ್ಷಕಿ ಜ್ಯೋತಿ ಅವರದ್ದು ಎಂದು ಖಚಿತಪಟ್ಟಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಪಿ. ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ಹಂತಕರು ಸಿಕ್ಕಿಬಿದ್ದ ನಂತರವೇ ಈ ಭೀಕರ ಕೊಲೆಗೆ ನಿಖರವಾದ ಕಾರಣವೇನು ಎಂಬುದು ತಿಳಿದುಬರಲಿದೆ” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಮತ್ತು ಶಿಕ್ಷಕ ವೃಂದದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


