ಬೆಂಗಳೂರು: ಸ್ಯಾಂಡಲ್‌ವುಡ್ ನ ಹಿರಿಯ ನಟಿ ಸುಧಾರಾಣಿ ಅವರು ತಮ್ಮ ಮತ್ತು ನಟ ಶಿವರಾಜ್‌ಕುಮಾರ್ ಅವರ ಬಗ್ಗೆ ಹರಡಿಸಲಾಗಿರುವ ಸುಳ್ಳು ಸುದ್ದಿಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಕೇವಲ ‘ವ್ಯೂವ್ಸ್’ ಮತ್ತು ಪ್ರಚಾರಕ್ಕಾಗಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ‘ವ್ಯೂವ್ಸ್ ಮಾಫಿಯಾ’ ವಿರುದ್ಧ ಅವರು ಕೆರಳಿ ಕೆಂಡವಾಗಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಸುಧಾರಾಣಿ ಅವರಿಗೆ ಶಿವರಾಜ್‌ಕುಮಾರ್ ಕಂಡರೆ ಪ್ರೀತಿ ಇತ್ತು ಮತ್ತು ಅವರನ್ನು ಮದುವೆಯಾಗಬೇಕೆಂಬ ಆಸೆ ಇತ್ತು” ಎಂಬ ಶೀರ್ಷಿಕೆಯಡಿ ಪೋಸ್ಟ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಸುಧಾರಾಣಿ ಅವರು ಯಾವುದೋ ಸಂದರ್ಶನದಲ್ಲಿ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳಲಾಗಿತ್ತು.
ಈ ಕಪೋಲಕಲ್ಪಿತ ಸುದ್ದಿಯನ್ನು ನೋಡಿ ಬೇಸರಗೊಂಡ ಸುಧಾರಾಣಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಖಡಕ್ ಉತ್ತರ ನೀಡಿದ್ದಾರೆ, “ಸ್ವಲ್ಪನಾದರೂ ನೈತಿಕತೆ ಇರಲಿ. ಕೇವಲ ವ್ಯೂವ್ಸ್‌ಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
“ಆಯ್ಕೊಂಡು ತಿನ್ನೋರೆಲ್ಲಾ ಕಂಟೆಂಟ್ ಕ್ರಿಯೇಟರ್ಸ್ ಆದರೆ ಹೀಗೆ ಆಗುವುದು. ಕಷ್ಟಪಟ್ಟು ಕೆಲಸ ಮಾಡಿ, ಸರಿಯಾದ ದಾರಿಯಲ್ಲಿ ಯಶಸ್ಸು ಗಳಿಸಿ,” ಎಂದು ಕಿವಿಮಾತು ಹೇಳಿದ್ದಾರೆ.
ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ಅವರು ‘ಆನಂದ್’, ‘ಮನ ಮೆಚ್ಚಿದ ಹುಡುಗಿ’, ‘ಸಂಯುಕ್ತಾ’ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದು, ಇಂದಿಗೂ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಆದರೆ ಈ ಸ್ನೇಹಕ್ಕೆ ಕಳಂಕ ತರುವಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಈಗ ಸುಧಾರಾಣಿ ಅವರು ಸಿಡಿದೆದ್ದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


