ದಾವಣಗೆರೆ: ದೇಶದಲ್ಲಿ ಆಟೋ ಎಲ್ ಪಿಜಿ (LPG) ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಆಟೋ ಚಾಲಕರು ತಾತ್ಕಾಲಿಕವಾಗಿ ಎಲ್ ಪಿಜಿ ಬದಲು ಪೆಟ್ರೋಲ್ ಬಳಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ದೇಶದಲ್ಲಿ ಯಾವಾಗಲೂ ಲಭ್ಯವಿರುತ್ತದೆ. ಆದರೆ ಆಟೋ ಎಲ್ ಪಿಜಿ ವಿಶ್ವದ ಕೆಲವೇ ದೇಶಗಳಲ್ಲಿ ಮಾತ್ರ ಲಭ್ಯವಿರುವ ಕಾರಣ ಅದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಒಟ್ಟು 372 ಆಟೋ ಎಲ್ ಪಿಜಿ ವಿತರಣಾ ಕೇಂದ್ರಗಳಿದ್ದು, ಈ ಪೈಕಿ ಸರ್ಕಾರಿ ಸ್ವಾಮ್ಯದ ಕೇಂದ್ರಗಳು ಕೇವಲ 72 ಮಾತ್ರ. ಉಳಿದ 300 ಕೇಂದ್ರಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ.
ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿರುವ ಕಾರಣ ಖಾಸಗಿ ಕಂಪನಿಗಳು ಎಲ್ ಪಿಜಿ ದರವನ್ನು ಪ್ರತಿ ಕೆ.ಜಿ.ಗೆ 110 ರೂಪಾಯಿಗಳವರೆಗೆ ಹೆಚ್ಚಿಸಿವೆ. ಆದರೆ ಸರ್ಕಾರಿ ಕೇಂದ್ರಗಳಲ್ಲಿ ದರ ಏರಿಕೆ ಮಾಡದ ಕಾರಣ ಅಲ್ಲಿ ಬೆಲೆ 89 ರೂಪಾಯಿಗಳಷ್ಟಿದೆ. ಇದೇ ಕಾರಣಕ್ಕೆ ಸರ್ಕಾರಿ ಬಂಕುಗಳಲ್ಲಿ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ಭಾರತವು ತನ್ನ ಎಲ್‌ಪಿಜಿ ಅಗತ್ಯದ ಶೇ. 60 ರಷ್ಟು ಉತ್ಪಾದನೆಯನ್ನು ಹೊಂದಿದ್ದು, ಉಳಿದ ಶೇ. 40 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಸಂಪನ್ಮೂಲಗಳ ಮಿತಿಯಿಂದಾಗಿ ಈ ಸಮಸ್ಯೆ ಎದುರಾಗಿದೆ. ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ ಮತ್ತು ನಿರಂತರ ಸರಬರಾಜು ನಡೆಯುತ್ತಿರುವುದರಿಂದ ಪೆಟ್ರೋಲ್ ಲಭ್ಯತೆಯ ಬಗ್ಗೆ ಚಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜೋಶಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಈ ಸಮಸ್ಯೆಯನ್ನು ರಾಜಕೀಯಗೊಳಿಸಬಾರದು ಎಂದು ಮನವಿ ಮಾಡಿದ ಅವರು, ಯುಪಿಎ ಸರ್ಕಾರದ ಅವಧಿಯ ಇಂಧನ ಪರಿಸ್ಥಿತಿಯನ್ನು ನೆನಪಿಸಿ ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


