ಮಂಡ್ಯ: ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ಅವರ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಳವಳ್ಳಿ ಮೂಲದ ಪ್ರಸನ್ನ ಎಂಬುವವರು ಮಾಜಿ ಶಾಸಕರ ವಿರುದ್ಧ ಈ ಆರೋಪ ಮಾಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮುಂದೆ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ಸೋಮವಾರ ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ದಿಶಾ’ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪ್ರಸನ್ನ ಕುಮಾರ್ ಎಂಬ ವ್ಯಕ್ತಿ, ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
“ನನ್ನ ಪತ್ನಿ ಮತ್ತು ಮಾಜಿ ಶಾಸಕ ಅನ್ನದಾನಿ ನಡುವೆ ಕಳೆದ 10 ವರ್ಷಗಳಿಂದ ಅಕ್ರಮ ಸಂಬಂಧವಿದೆ. ಇದರಿಂದ ನನ್ನ ಸಂಸಾರ ಬೀದಿಗೆ ಬಂದಿದೆ. ಅನ್ನದಾನಿ ಅವರು ನನ್ನ ಪತ್ನಿಗೆ ಮೈಸೂರಿನಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಕೊಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ನನ್ನ ಮೇಲೆಯೇ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ” ಎಂದು ಪ್ರಸನ್ನ ಆರೋಪಿಸಿದ್ದಾರೆ.
“ನನ್ನ ಹೆಂಡತಿ ಅನ್ನದಾನಿ ಜೊತೆಯೇ ಇರಲಿ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ. ವಿಚ್ಛೇದನ ನೀಡಲು ಆಕೆ 30 ಲಕ್ಷ ರೂಪಾಯಿ ಹಣ ಬೇಡುತ್ತಿದ್ದಾಳೆ. ಇನ್ನೊಬ್ಬನ ಜೊತೆ ಇರುವ ಹೆಂಡತಿಯೊಂದಿಗೆ ನಾನು ಹೇಗೆ ಬಾಳಲಿ? ನನಗೆ ಈ ಸಂಕಷ್ಟದಿಂದ ಮುಕ್ತಿ ಕೊಡಿಸಿ” ಎಂದು ಪ್ರಸನ್ನ ಕುಮಾರಸ್ವಾಮಿ ಅವರ ಬಳಿ ಅಲವತ್ತುಕೊಂಡಿದ್ದಾರೆ.
ಸಭೆಯ ಮಧ್ಯೆ ನಡೆದ ಈ ಅನಿರೀಕ್ಷಿತ ಘಟನೆಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆಶ್ಚರ್ಯಚಕಿತರಾದರು. ವ್ಯಕ್ತಿಯ ದೂರನ್ನು ಆಲಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು, “ಸಭೆ ಮುಗಿದ ಬಳಿಕ ಈ ಬಗ್ಗೆ ವಿವರವಾಗಿ ಮಾತನಾಡುತ್ತೇನೆ ಮತ್ತು ನಿಮಗೆ ನ್ಯಾಯ ಕೊಡಿಸುತ್ತೇನೆ” ಎಂದು ಭರವಸೆ ನೀಡಿ ಸಮಾಧಾನಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


