ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಂಗನಗೌಡ ಪಾಟೀಲ್ (50) ಕೊಲೆಯಾದ ದುರ್ದೈವಿ.
ಕೊಲೆಯಾದ ಸಂಗನಗೌಡ ಮತ್ತು ಆರೋಪಿಗಳ ಕುಟುಂಬಗಳ ನಡುವೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಾಗೂ ವೈಯಕ್ತಿಕ ವೈಷಮ್ಯವಿತ್ತು. ಸಿದ್ದೇಶ್ವರ ಜಾತ್ರೆಯ ಮೆರವಣಿಗೆಯ ಸಮಯದಲ್ಲಿ ಸಂಗನಗೌಡ ತನ್ನ ವಿರೋಧಿಗಳ ಮನೆಯ ಮುಂದೆ ಕುಣಿಯುತ್ತಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಎದುರಾಳಿ ಗುಂಪು, “ನಮ್ಮ ಮನೆಯ ಮುಂದೆ ಕುಣಿಯಬೇಡ” ಎಂದು ತಗಾದೆ ತೆಗೆದಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿದೆ.
ಸಿಟ್ಟಿಗೆದ್ದ ಆರೋಪಿಗಳು ಕುಡಗೋಲು, ಕೊಡಲಿ ಮತ್ತು ಕಬ್ಬಿಣದ ರಾಡ್‌ಗಳಿಂದ ಸಂಗನಗೌಡ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ದೇಮಪ್ಪ ಬಳಗನ್ನವರ, ಮಂಜುನಾಥ ಬಳಗನ್ನವರ, ರುದ್ರಪ್ಪ, ವಿಜಯ್, ಸೂರಪ್ಪ, ಸಿದ್ದಪ್ಪ, ನಾಗರಾಜ ಮತ್ತು ಬಸವಂತಪ್ಪ ಎಂದು ಗುರುತಿಸಲಾಗಿದೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


