ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಜನರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿದೆ. ಈ ಮಹತ್ವದ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಇಂದು (ಶುಕ್ರವಾರ) ಪ್ರಕಟಿಸಲಿದೆ.
ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದಗಳು ನಡೆದವು. ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, “ಇದು ರಾಜಕೀಯ ದುರುದ್ದೇಶದಿಂದ ನಡೆದ ವ್ಯವಸ್ಥಿತ ಕೊಲೆ. ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಭಾವ ಬಳಸಲಾಗಿದೆ. ಆದ್ದರಿಂದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು” ಎಂದು ಮನವಿ ಮಾಡಿದರು.
ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡ ಶಾಸಕ ವಿನಯ್ ಕುಲಕರ್ಣಿ, “ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ದ್ವೇಷದಿಂದ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ಕೃಷಿಕನಾಗಿದ್ದು, ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ನನಗೆ ಮೂವರು ಮಕ್ಕಳಿದ್ದಾರೆ, ಕುಟುಂಬದ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಇಲ್ಲದಿದ್ದರೂ ಜನರು ನನ್ನನ್ನು ನಂಬಿ ಗೆಲ್ಲಿಸಿದ್ದಾರೆ” ಎಂದು ಹೇಳುತ್ತಾ ಕಡಿಮೆ ಶಿಕ್ಷೆ ನೀಡುವಂತೆ ಕೋರಿದರು.
ವಿನಯ್ ಕುಲಕರ್ಣಿ ಅವರ ಪರ ವಕೀಲರು ಕೂಡ ವಾದ ಮಂಡಿಸಿ, ಅವರ ಸಾಮಾಜಿಕ ಕಾರ್ಯಗಳು ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಪರಿಗಣಿಸಿ ಕನಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ವಿನಂತಿಸಿದರು.
2016ರಲ್ಲಿ ಧಾರವಾಡದ ಸಪ್ತಾಪುರದಲ್ಲಿ ಜಿ.ಪಂ ಸದಸ್ಯ ಯೋಗೀಶ್‌ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣವನ್ನು ನಂತರ ಸಿಬಿಐಗೆ ವಹಿಸಲಾಗಿತ್ತು. ಸುಮಾರು ಎಂಟು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈಗ ತೀರ್ಪು ಹೊರಬಿದ್ದಿದ್ದು, ಇಡೀ ರಾಜ್ಯದ ಕುತೂಹಲ ನ್ಯಾಯಾಲಯ ನೀಡಲಿರುವ ಶಿಕ್ಷೆಯ ಪ್ರಮಾಣದ ಮೇಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


