ತಿಪಟೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬೆಡ್ ಶೀಟ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಪ ಅವಧಿಯಲ್ಲೇ ಬೆಂಕಿ ಕೆನ್ನಾಲಿಗೆ ಪಕ್ಕದ ಕಟ್ಟಡಕ್ಕೂ ವ್ಯಾಪಿಸಿದ ಘಟನೆ ನಡೆದಿದೆ.
ತಿಪಟೂರು ನಗರದ ಸಮೀಪವಿರುವ ಬೆಡ್ ಶೀಟ್ ಕಾರ್ಖಾನೆಯಲ್ಲಿ ಶನಿವಾರ ಈ ಅವಘಡ ಸಂಭವಿಸಿದೆ. ಬೆಡ್‌ಶೀಟ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳು ಬೆಂಕಿಗೆ ಆಹುತಿಯಾಗಿವೆ. ಗಾಳಿಯ ತೀವ್ರತೆಗೆ ಬೆಂಕಿ ವೇಗವಾಗಿ ಹರಡಿ, ಪಕ್ಕದಲ್ಲೇ ಇದ್ದ ಪೊರಕೆ ತಯಾರಿಸುವ ಕಟ್ಟಡಕ್ಕೂ ವ್ಯಾಪಿಸಿತು. ಇದರಿಂದಾಗಿ ಎರಡೂ ಘಟಕಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡಕ್ಕೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


