ಬೆಂಗಳೂರು: ಕಬಡ್ಡಿ ಪಂದ್ಯವೊಂದರ ಸಂದರ್ಭದಲ್ಲಿ ಬೆಟ್ಟಿಂಗ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಈಗಿನ ಕಾಲದಲ್ಲಿ ತಮಾಷೆ ಕೂಡ ಮಾಡುವಂತಿಲ್ಲ ಎಂಬಂತಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಹೇಳಿದ್ದು ಗ್ರಾಮೀಣ ಭಾಗದಲ್ಲಿ ಕಬಡ್ಡಿ ಪಂದ್ಯಗಳ ವೇಳೆ ಸಾಮಾನ್ಯವಾಗಿ ಆಡುವಂತಹ ಮಾತುಗಳು. ಕಾನೂನಿನ ದೃಷ್ಟಿಯಿಂದ ಅದು ತಪ್ಪಾಗಿ ಕಾಣಿಸಬಹುದು, ಆದರೆ ನಾನು ಯಾವ ಉದ್ದೇಶದಿಂದ ಹೇಳಿದ್ದೇನೆ ಎಂಬುದು ಮುಖ್ಯವಾಗುತ್ತದೆ” ಎಂದು ಸಮರ್ಥಿಸಿಕೊಂಡರು.
“ನಾನು ಬೆಟ್ಟಿಂಗ್ ಪ್ರಮೋಟ್ ಮಾಡಿ ಎಂದು ಹೇಳಿದ್ದರೆ ಅದು ತಪ್ಪು. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಬೆಟ್ಟಿಂಗ್ ಪ್ರೋತ್ಸಾಹಿಸುತ್ತೇನೆ ಎಂಬುದು ಶುದ್ಧ ಸುಳ್ಳು. ಜನರು ಇದನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ” ಎಂದು ತಿಳಿಸಿದರು.
“ನಾನು ಕಾನೂನನ್ನು ಗೌರವಿಸುವವನು. ಕಾನೂನು ರಕ್ಷಣೆ ಮಾಡುವ ಖಾತೆಯನ್ನು ನಿಭಾಯಿಸುತ್ತಿದ್ದೇನೆ. ನೋಟಿಸ್ ನೀಡದೆ ಏಕಾಏಕಿ ಆದೇಶ ಮಾಡಲಾಗಿದೆ. ಆದರೂ ಕಾನೂನು ಏನು ಕ್ರಮ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಗೌರವ ಕೊಡುತ್ತೇನೆ” ಎಂದರು.
ಕೋರ್ಟ್‌ನಿಂದ ತಮಗೆ ಯಾವುದೇ ನೋಟಿಸ್ ಬಂದಿರಲಿಲ್ಲ. ನೋಟಿಸ್ ಬಂದಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಮನವರಿಕೆ ಮಾಡಿಕೊಡಲು ಅವಕಾಶವಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


